ಬಂಟ್ವಾಳ, ಕಾರಿಂಜ: ನಾಲ್ಕು ಯುಗಗಳಲ್ಲಿ ಪ್ರಖ್ಯಾತಿ ಪಡೆದಿರುವ ಪುಣ್ಯಕ್ಷೇತ್ರ ಬಂಟ್ವಾಳ ತಾಲೂಕಿನ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವರ ಸನ್ನಿಧಿಯಲ್ಲಿ ಬೆಳೆದು ಬಂದ ಯುವ ಸಂಘಟನೆಯೇ 'ರಥಬೀದಿ ಜವನೆರ್ ಕಾರಿಂಜ'. ಸಮಾಜದ ಏಳಿಗೆಗಾಗಿ ಎಳೆಮರೆಯ ಕಾಯಿಯಂತೆ ನಿರಂತರವಾಗಿ ಶ್ರಮಿಸುತ್ತಿರುವ ಈ ಯುವಕರ ಪಡೆಯು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.
ಇದರ ಭಾಗವಾಗಿ, ತಮ್ಮ ತಂಡದ ಸದಸ್ಯರೊಬ್ಬರ ಗದ್ದೆಯಲ್ಲಿ ತಾವೇ ಬೆಳೆದ ಉತ್ಕೃಷ್ಟ ಬತ್ತದ ಪೈರನ್ನು ಮೂರು ಗೋಶಾಲೆಗಳಿಗೆ 'ಗೋಗ್ರಾಸ' (ಗೋ ಆಹಾರ) ರೂಪದಲ್ಲಿ ಅರ್ಪಿಸುವ ಮೂಲಕ ಗೋ ಸೇವೆಯ ಮಾದರಿ ಕಾರ್ಯ ಮಾಡಿದೆ.
ಈ ಗೋಗ್ರಾಸ್ ಸೇವೆಯನ್ನು ಕಪಿಲ ಪಾರ್ಕ್ ಗೋ ಶಾಲೆ (ಕೆಂಜಾರು, ಪೇಜಾವರ, ಮಂಗಳೂರು), ಶ್ರೀ ರಾಧಾ ಸುರಭಿ ಗೋಮಂದಿರ ಮತ್ತು ಶ್ರೀ ವಜ್ರದೇಹಿ ಮಠ (ಗುರುಪುರ) ಗೋಶಾಲೆಗಳಿಗೆ ಅರ್ಪಿಸಲಾಯಿತು. 'ರಥಬೀದಿ ಜವನೆರ್ ಕಾರಿಂಜ' ತಂಡವು ಇದೇ ರೀತಿ ಸಮಾಜಸೇವೆಯಲ್ಲಿ ತೊಡಗಿಕೊಂಡು, ಮುಂದೆ ಇನ್ನಷ್ಟು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ಮಾಡಿದೆ. ಯುವಕರ ಈ ಶ್ರಮ ಮತ್ತು ಗೋಮಾತೆಯ ಮೇಲಿನ ಭಕ್ತಿ ನಿಜಕ್ಕೂ ಶ್ಲಾಘನೀಯ ಎಂದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





