23 October 2025 | Join group

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸರಸ್ವತಿ ಮಂಟಪ ಲೋಕಾರ್ಪಣೆ

  • 14 Oct 2025 10:05:50 PM

ಬಂಟ್ವಾಳ: "ಧರ್ಮಾಚರಣೆಯಿಂದ ಪ್ರಪಂಚಕ್ಕೆ ಶ್ರೇಯಸ್ಸು. ಧರ್ಮದಿಂದಲೇ ಸುಖ, ಸಂಪತ್ತು ಸಿದ್ಧಿಸುವುದು. ಜಗತ್ತಿನಲ್ಲಿ ಹಲವಾರು ಸೌಖರ್ಯಗಳಿದ್ದರೂ‌ ಅಧರ್ಮದಿಂದ ದುಃಖಕ್ಕೆ ಕಾರಣವಾಗಿದೆ. ಭಾರತೀಯ ಧರ್ಮ ಪ್ರಪಂಚಕ್ಕೆ ಆಧಾರವಾಗಿದ್ದು ಸನಾತನ ಧರ್ಮ ರಕ್ಷಣೆಯಾಗಬೇಕು. ಧರ್ಮಪಾಲನೆಯೊಂದಿಗೆ ಧರ್ಮ ರಕ್ಷಣೆಯನ್ನು ಎಲ್ಲರೂ ಮಾಡಬೇಕಾಗಿದೆ. ವಿದ್ಯಾ ಸಂಪತ್ತು ಎಲ್ಲಾ ಸಂಪತ್ತಿಗಿಂತಲೂ ಶ್ರೇಷ್ಠವಾಗಿದೆ" ಎಂದು ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ಶಂಕರ ಮಹಾಸಂಸ್ಥಾನದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮಿಗಳವರು ಹೇಳಿದರು.

 

ಅವರು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸರಸ್ವತಿ ಮಂಟಪ ಮತ್ತು ಶಂಕರಾಚಾರ್ಯ ಸಭಾ ಮಂಟಪ ಲೋಕಾರ್ಪಣೆ ಮಾಡಿ‌ದ ಬಳಿಕ ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ಏರ್ಪಡಿಸಲಾದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶೃಂಗೇರಿ ಮಹಾಸಂಸ್ಥಾನದ ಪರಮಪೂಜ್ಯರು ಶ್ರೀರಾಮ ಶಿಶುಮಂದಿರ ಹಾಗೂ ಶ್ರೀರಾಮ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಸರಸ್ವತಿ ಮಂಟಪದ ಪರದೆ ಅನಾವರಣಗೊಳಿಸಿ ಅಮೃತ ಶಿಲೆಯಲ್ಲಿ ನಿರ್ಮಿತವಾದ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿದರು.

ಬಳಿಕ ಶಿಶುಮಂದಿರ ಮತ್ತು ಪೂರ್ವಗುರುಕುಲದ ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಶ್ರೀರಾಮ ಇಂಗ್ಲೀಷ್ ಮಾಧ್ಯಮದ ನೂತನ ಸಭಾಭವನ 'ಶಂಕರಾಚಾರ್ಯ'ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಶಾಲಾ ಪರಿಸರದಲ್ಲಿರುವ ಗೋಶಾಲೆಗೆ ತೆರಳಿ ಹಸುಗಳಿಗೆ ಮೇವು ನೀಡಿದರು. ಮಕ್ಕಳ ಉದ್ಯಾನವನ ವೀಕ್ಷಿಸಿದರು.

ವಿದ್ಯಾಕೇಂದ್ರದ ದೈನಂದಿನ ಚಟುವಟಿಕೆ ಸರಸ್ವತಿ ವಂದನೆ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ಶ್ರೀಸಂಸ್ಥಾನದವರು ವಿದ್ಯೆಯ ಜೊತೆಗೆ ಸಂಸ್ಕಾರವು ವ್ಯಕ್ತಿಗೆ ಭೂಷಣ. ಶಿಕ್ಷಣದ ಜೊತೆಗೆ ಸಂಸ್ಕಾರಕ್ಕೂ ಪ್ರಾಶಸ್ತ್ಯ ನೀಡುತ್ತಾ ಧರ್ಮದ ರಕ್ಷಣೆಯಲ್ಲಿ ತೊಡಗಬೇಕು ಎಂದರು.

 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಭೋದನ್ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮುಂಬೈ ಉದ್ಯಮಿಗಳಾದ ರವಿಕಾಂತ ಮಿಶ್ರ, ಶ್ರೀ ವಿಜಯ ಕಲಾಂತ್ರಿ, ನವದೆಹಲಿಯ ಉದ್ಯಮಿ ಶ್ರೀ ಸಿದ್ಧಾರ್ಥ, ಬೆಂಗಳೂರಿನ ಉದ್ಯಮಿಗಳಾದ ಶ್ರೀಮತಿ ಅಂಜನಾ ಕಿಣಿ, ಶ್ರೀ ಗಿರೀಶ್ ರಾವ್, ಬಾಲಕೃಷ್ಣ ಭಂಡಾರಿ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.