ಬಂಟ್ವಾಳ: ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವವಾಹಿನಿ 56ನೇ ಮಾಲಿಕೆ ಗಣ್ಯರ, ಅಧ್ಯಕರು, ಪದಾಧಿಕಾರಿಗಳು ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿತು.
ನಾರಾಯಣಗುರುಗಳು ಷೋಷಿತ ಸಮಾಜದ ದಾರಿದೀಪ : ಬಿ ರಮಾನಾಥ ರೈ
"ಸಮಾಜದಲ್ಲಿ ಅಸ್ಪೃಶ್ಯತೆ, ಜಾತ್ಯತೀತತೆ ಮತ್ತು ಅಸಮಾನತೆ ವ್ಯಾಪಕವಾಗಿದ್ದ ಕಾಲದಲ್ಲಿ, ನಾರಾಯಣ ಗುರುಗಳು ಪ್ರಜ್ಞೆಯ ಬೆಳಕಾಗಿ ಉದಯಿಸಿದರು. “ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಅವರ ಘೋಷಣೆ, ಸಾಮಾಜಿಕ ಬದಲಾವಣೆಯ ಕ್ರಾಂತಿಯಾಗಿ ಪರಿಣಮಿಸಿತು ಮತ್ತು ಆತ್ಮವಿಶ್ವಾಸದಿಂದ ಬದುಕುವಂತೆ ಪ್ರೇರೇಪಿಸಿತು. ನಾರಾಯಣಗುರುಗಳ ತತ್ವಗಳು ಇಂದಿಗೂ ಸಾಮಾಜಿಕ ನ್ಯಾಯ, ಸಹಿಷ್ಣುತೆ ಮತ್ತು ಸಮಾನತೆಗಾಗಿ ದಾರಿದೀಪವಾಗಿ ಬೆಳಗುತ್ತಿವೆ. ಅವರ ಸಂದೇಶಗಳು ನಮ್ಮನ್ನು ಮಾನವೀಯತೆ ಮತ್ತು ಸಹಭಾಗಿತ್ವದ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತವೆ" ಎಂದು ಮಾಜಿ ಸಚಿವರಾದ ಬಿ ರಮಾನಾಥ ರೈ ಹೇಳಿದರು.
ಅವರು ಗುರುವಾರ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಮನೋಹರ್ ಕುಲಾಲ್ ನೆರಂಬೋಳು ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 56ರ ಭಜನಾ ಸಂಕೀರ್ತನೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಾರಾಯಣಗುರುಗಳು ಮಾನವೀಯತೆಯ ಆಧಾರಸ್ತಂಭ : ಸುರೇಶ್ ಕುಮಾರ್ ಸಮಾಜದ ಮೂಲ ಶಕ್ತಿ ಜ್ಞಾನ ಮತ್ತು ಶಿಕ್ಷಣ ಎಂದು ನಾರಾಯಣಗುರುಗಳು ಬೋಧಿಸಿದರು. ಶಿಕ್ಷಣವೇ ಮಾನವನನ್ನು ಅಜ್ಞಾನದಿಂದ ಮುಕ್ತಗೊಳಿಸುವ ಮಾರ್ಗ ಎಂದು ಅವರು ನಂಬಿದರು. ಅವರು ಶೋಷಿತ ವರ್ಗದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸಲು ಶಾಲೆಗಳನ್ನು ಸ್ಥಾಪಿಸಿದರು. ಶಿಕ್ಷಣದಿಂದಲೇ ಸಮಾನತೆ ಮತ್ತು ಆತ್ಮಗೌರವ ಬರಬಹುದು ಎಂಬ ನಂಬಿಕೆಯನ್ನು ಅವರು ಜನಮನಗಳಲ್ಲಿ ಬಿತ್ತಿದರು. ಅವರು ಬೋಧಿಸಿದ ಜ್ಞಾನ, ಶಿಕ್ಷಣ ಮತ್ತು ಮಹಿಳಾ ಸ್ವಾತಂತ್ರ್ಯದ ತತ್ವಗಳು ಸಮಾನತೆ ಮತ್ತು ಮಾನವೀಯತೆಯ ಆಧಾರಸ್ತಂಭಗಳಾಗಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಪ್ರಾಧಿಕಾರದ ಸದಸ್ಯ, ವಕೀಲರಾದ ಸುರೇಶ್ ಕುಮಾರ್ ಗುರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಮಚ್ಚೇಂದ್ರ ಸಾಲ್ಯಾನ್, ಲಕ್ಷ್ಮಣ ಅಗ್ರಬೈಲು, ಬಂಟ್ವಾಳ ಪುರಸಭೆಯ ಮಾಜಿ ಸದಸ್ಯ ಸದಾಶಿವ ಬಂಗೇರ, ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮದ್ವ, ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಮಹೇಶ್ ಬೊಳ್ಳಾಯಿ ರಂಜಿತ್ ಬಿ.ಸಿ.ರೋಡ್, ಚಿನ್ನಾ ಕಲ್ಲಡ್ಕ, ಸಂಘಟನಾ ಕಾರ್ಯದರ್ಶಿ ಯಶೋಧರ ಕಡಂಬಳಿಕೆ, ಸದಸ್ಯರಾದ ನವೀನ್ ಕುಡ್ಮೇರು, ಆನಂದ ಪೂಜಾರಿ ಅಜ್ಜಿಬೆಟ್ಟು, ಸುದೀಪ್ ಸಾಲ್ಯಾನ್ , ನವೀನ್ ಕಾರಾಜೆ, ನಾರಾಯಣ ಪಲ್ಲಿಕಂಡ, ಯತೀಶ್ ಬೊಳ್ಳಾಯಿ, ನಾಗೇಶ್ ಪೂಜಾರಿ ಏಲಾಬೆ, ಪ್ರಶಾಂತ್ ಅಮೀನ್ ಏರಮಲೆ, ವಿಘ್ನೇಶ್ ಬೊಳ್ಳಾಯಿ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ಅರುಣ್ ಕುಮಾರ್, ನಾಗೇಶ್ ಪೊನ್ನೋಡಿ, ಹರೀಶ್ ಕೋಟ್ಯಾನ್ ಕುದನೆ, ರಾಜೇಶ್ ಸುವರ್ಣ ಸಲಹೆಗಾರ ರಾಮಚಂದ್ರ ಸುವರ್ಣ ತುಂಬೆ ಮತ್ತಿತರರು ಉಪಸ್ಥಿತರಿದ್ದರು.
ಭಜನಾ ಕಾರ್ಯಕ್ಕೆ ಸಂಗೀತದಲ್ಲಿ ಸಾತ್ವಿಕ್ ದೇರಾಜೆ, ರಾಜೇಶ್ ಅಮ್ಟೂರು, ವಿನಯ ಆಚಾರ್ಯ ಸಹಕರಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸ್ವಾಗತಿಸಿದರು, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು. ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.