12 July 2026 |

ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆಗಳಿಂದ ಎಚ್ಚರ: ಮೋಸವಾಗದಿರಲು ಈ 8 ಎಚ್ಚರಿಕೆಗಳನ್ನು ತಿಳಿದುಕೊಳ್ಳಿ

  • 11 Jul 2026 03:10:50 PM

ಧರ್ಮದ ಹೆಸರಿನಲ್ಲಿ ಯಾರಾದರೂ ಸಹಾಯ ಅಥವಾ ದೇಣಿಗೆ ಕೇಳಿದರೆ, ದೇವರ ಮೇಲಿನ ಭಕ್ತಿ ಮತ್ತು ಶ್ರದ್ಧೆಯಿಂದ ಹೆಚ್ಚಿನ ಪ್ರಶ್ನೆಗಳನ್ನು ಕೇಳದೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ಅನೇಕ ಜನರ ಸ್ವಭಾವ. ಭಕ್ತಿ, ಕರುಣೆ ಮತ್ತು ಮಾನವೀಯತೆ ನಮ್ಮ ಸಮಾಜದ ಶಕ್ತಿಯಾಗಿದ್ದು, ಇವುಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

 

ಆದರೆ, ವಂಚನೆಗೆ ಒಳಗಾಗುವವರು ಇರುವವರೆಗೆ, ವಂಚಿಸಲು ಯತ್ನಿಸುವವರೂ ಇರುತ್ತಾರೆ ಎನ್ನುವುದು ವಾಸ್ತವ. ದುಃಖಕರ ಸಂಗತಿಯೆಂದರೆ, ಕೆಲವರು ಜನರ ಧಾರ್ಮಿಕ ನಂಬಿಕೆ, ಭಾವನೆ ಮತ್ತು ದಾನ ಮಾಡುವ ಮನೋಭಾವವನ್ನೇ ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ.

 

ಧಾರ್ಮಿಕ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸುವ ಪ್ರಕರಣಗಳು ವಿವಿಧ ಸಂದರ್ಭಗಳಲ್ಲಿ ವರದಿಯಾಗಿವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳ ಹೆಸರಿನಲ್ಲಿ ಜನರಿಂದ ಹಣ ಅಥವಾ ದೇಣಿಗೆ ಸಂಗ್ರಹಿಸಿ ವಂಚಿಸಿದ ಘಟನೆಗಳು ಕಾಲಕಾಲಕ್ಕೆ ವರದಿಯಾಗುತ್ತಲೇ ಇವೆ. ಆದ್ದರಿಂದ, ಯಾವ ಧರ್ಮದ ಹೆಸರಿನಲ್ಲೇ ಮನವಿ ಬಂದರೂ ಭಕ್ತಿಯ ಜೊತೆಗೆ ವಿವೇಕ ಮತ್ತು ಜಾಗೃತಿಯನ್ನೂ ಹೊಂದಿರುವುದು ಅಗತ್ಯ.

 

ಧರ್ಮದ ಮೇಲಿನ ಭಕ್ತಿ ನಮ್ಮ ಸಂಸ್ಕೃತಿಯ ಭಾಗ. ಆದರೆ ಭಕ್ತಿಯ ಜೊತೆಗೆ ಜಾಗೃತಿಯೂ ಇರಬೇಕು. ದೇಣಿಗೆ ನೀಡುವ ಮೊದಲು ಕೇವಲ ಒಂದು ನಿಮಿಷ ಪರಿಶೀಲನೆ ಮಾಡಿದರೆ, ನಿಮ್ಮ ಹಣ ಸರಿಯಾದ ಉದ್ದೇಶಕ್ಕೆ ತಲುಪುವುದರ ಜೊತೆಗೆ ವಂಚನೆಯಿಂದ ನಿಮ್ಮನ್ನೂ ಇತರರನ್ನೂ ರಕ್ಷಿಸಬಹುದು.

 

ಅಪರಿಚಿತರು ಧರ್ಮದ ಹೆಸರಿನಲ್ಲಿ ನಡೆಸುವ ವಂಚನೆಗಳನ್ನು ಗುರುತಿಸುವುದು ಹೇಗೆ?

1. ತುರ್ತು ಒತ್ತಡ ಹೇರಿದರೆ ಎಚ್ಚರ

ಕೆಲವರು “ಈಗಲೇ ಹಣ ಕೊಡಬೇಕು”, “ಇಲ್ಲದಿದ್ದರೆ ನಿಮಗೆ ಕಷ್ಟವಾಗುತ್ತದೆ", "ದೇವರ ಕೋಪಕ್ಕೆ ಗುರಿಯಾಗುತ್ತೀರಿ", "ನಿಮ್ಮ ಅದೃಷ್ಟ ಹಾಳಾಗುತ್ತದೆ" ಎಂಬ ರೀತಿಯಲ್ಲಿ ಭಯ ಹುಟ್ಟಿಸಿ ಒತ್ತಡ ಹೇರಬಹುದು. ಇಂತಹ ಸಂದರ್ಭಗಳಲ್ಲಿ ಮೊದಲು ನೀವು ಮಾಡಬೇಕಾಗಿರುವುದ ಅವರ ಮೇಲೆ 'ಅನುಮಾನ'. ತುರ್ತು ಒತ್ತಡದ ಹಿಂದೆ ಮೋಸದ ಉದ್ದೇಶವಿರಬಹುದೇ ಎಂಬುದನ್ನು ಯೋಚಿಸಿ.

 

2. ಗುರುತು ಕೇಳಿ

ಅಪರಚಿತ ದೇಣಿಗೆ ಸಂಗ್ರಹಿಸುವವರು ಯಾವ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಅವರ ಬಳಿ ಅಧಿಕೃತ ಗುರುತಿನ ಚೀಟಿ, ಅನುಮತಿ ಪತ್ರ ಅಥವಾ ಸಂಸ್ಥೆಯ ಪರಿಚಯ ಪತ್ರ ಇದೆಯೇ ಎಂದು ಕೇಳಿ. ಪ್ರಶ್ನೆ ಕೇಳುವುದು ಅವಿಶ್ವಾಸದ ಸಂಕೇತವಲ್ಲ; ಅದು ಜಾಗೃತ ನಾಗರಿಕನ ಜವಾಬ್ದಾರಿಯಾಗಿದೆ.

 

3. ರಸೀದಿ ಪಡೆಯಿರಿ

ನಿಜವಾದ ಧಾರ್ಮಿಕ ಸಂಸ್ಥೆಗಳು ಅಥವಾ ನೋಂದಾಯಿತ ಸಂಘಟನೆಗಳು ಸಾಮಾನ್ಯವಾಗಿ ಅಧಿಕೃತ ರಸೀದಿ ಅಥವಾ ದಾಖಲೆಯನ್ನು ನೀಡುತ್ತವೆ. ರಸೀದಿಯಲ್ಲಿ ಸಂಸ್ಥೆಯ ಹೆಸರು, ಸಂಪರ್ಕ ಮಾಹಿತಿ ಹಾಗೂ ನೋಂದಣಿ ವಿವರಗಳಿದ್ದರೆ ಪರಿಶೀಲಿಸಿಕೊಳ್ಳುವುದು ಉತ್ತಮ.

 

4. ದೇವಾಲಯ, ಮಸೀದಿ, ಚರ್ಚ್ ಅಥವಾ ಸಂಬಂಧಿತ ಸಮಿತಿಯನ್ನು ಸಂಪರ್ಕಿಸಿ

ಯಾವುದೇ ಧಾರ್ಮಿಕ ಸಂಸ್ಥೆಯ ಹೆಸರಿನಲ್ಲಿ ಹಣ ಕೇಳಿದರೆ, ಮೊದಲು ಸಂಬಂಧಿತ ಅಧಿಕೃತ ದೂರವಾಣಿ ಸಂಖ್ಯೆ ಅಥವಾ ವೆಬ್‌ಸೈಟ್ ಮೂಲಕ ಮಾಹಿತಿ ದೃಢಪಡಿಸಿಕೊಳ್ಳಿ. ಸ್ವಲ್ಪ ಸಮಯ ತೆಗೆದುಕೊಂಡು ಪರಿಶೀಲಿಸುವುದು ದೊಡ್ಡ ನಷ್ಟವನ್ನು ತಪ್ಪಿಸಬಹುದು.

 

5. ಭಾವನೆಗಿಂತ ವಿವೇಕಕ್ಕೆ ಆದ್ಯತೆ ನೀಡಿ

ಧಾರ್ಮಿಕ ಭಾವನೆ ಸಹಜ. ಆದರೆ ಹಣ ಅಥವಾ ದೇಣಿಗೆ ನೀಡುವ ಮೊದಲು ಅದರ ಉದ್ದೇಶ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ತಪ್ಪಲ್ಲ. ನಿಜವಾದ ಸೇವಾ ಕಾರ್ಯಗಳು ಪ್ರಶ್ನೆಗಳನ್ನು ಸ್ವಾಗತಿಸುತ್ತವೆ.

 

6. ಅಸ್ಪಷ್ಟ ಉತ್ತರ ನೀಡಿದರೆ ಎಚ್ಚರ

“ಹಣವನ್ನು ಎಲ್ಲಿ ಬಳಸುತ್ತೀರಿ?”, “ಯಾರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ?”, “ಯಾವ ಸಂಸ್ಥೆಯ ಪರವಾಗಿ ಸಂಗ್ರಹಿಸುತ್ತಿದ್ದೀರಿ?” ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗದಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸಿ.

 

7. ಡಿಜಿಟಲ್ ಪಾವತಿ ಅಥವಾ ಅಧಿಕೃತ ಖಾತೆಗೆ ಆದ್ಯತೆ ನೀಡಿ

ಸಾಧ್ಯವಾದರೆ ಧಾರ್ಮಿಕ ಸಂಸ್ಥೆಯ ಅಧಿಕೃತ ಬ್ಯಾಂಕ್ ಖಾತೆ ಅಥವಾ ಅಧಿಕೃತ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕವೇ ದೇಣಿಗೆ ನೀಡಿ. ಇದರಿಂದ ಹಣ ಸರಿಯಾದ ವ್ಯಕ್ತಿ ಅಥವಾ ಸಂಸ್ಥೆಗೆ ತಲುಪಿದೆಯೇ ಎಂಬ ದಾಖಲೆಯೂ ಇರುತ್ತದೆ.

 

8. ಸಂದೇಹಾಸ್ಪದ ಘಟನೆ ಕಂಡರೆ ಮಾಹಿತಿ ನೀಡಿ

ಧರ್ಮದ ಹೆಸರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹಣ ಸಂಗ್ರಹಣೆ ನಡೆಯುತ್ತಿರುವುದು ಕಂಡುಬಂದರೆ ಸ್ಥಳೀಯರು, ಸ್ಥಳೀಯ ಪೊಲೀಸ್ ಠಾಣೆ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿ. ನಿಮ್ಮ ಒಂದು ಜಾಗೃತ ಕ್ರಮದಿಂದ ಅನೇಕ ಜನರು ವಂಚನೆಯಿಂದ ಪಾರಾಗಬಹುದು.

 

ಧರ್ಮವು ಜನರನ್ನು ಒಗ್ಗೂಡಿಸುವ, ಪ್ರೀತಿ, ಕರುಣೆ ಮತ್ತು ಸೇವೆಯ ಸಂದೇಶ ಸಾರುವ ಶಕ್ತಿಯಾಗಿದೆ. ಕೆಲ ವ್ಯಕ್ತಿಗಳ ತಪ್ಪು ಕೃತ್ಯಗಳಿಂದ ಯಾವುದೇ ಧರ್ಮವನ್ನು ಅಳೆಯಬಾರದು. ಅದೇ ಸಮಯದಲ್ಲಿ, ಯಾವುದೇ ಧರ್ಮದ ಹೆಸರಿನಲ್ಲಾದರೂ ಅಪರಿಚಿತರು ಹಣ ಅಥವಾ ದೇಣಿಗೆ ಕೇಳಿದಾಗ ಭಾವನೆಯ ಜೊತೆಗೆ ವಿವೇಕವನ್ನೂ ಬಳಸುವುದು ಅತ್ಯಗತ್ಯ. ಭಕ್ತಿ ಇರಲಿ… ಆದರೆ ಜಾಗೃತಿಯೂ ಜೊತೆಯಾಗಿರಲಿ.

 

ಸೂಚನೆ: ನಿಜವಾದ ಧಾರ್ಮಿಕ ಸಂಸ್ಥೆಗಳು, ಸಮಾಜಸೇವಾ ಸಂಘಟನೆಗಳು ಹಾಗೂ ಸೇವಾ ಮನೋಭಾವದಿಂದ ದೇಣಿಗೆ ಸಂಗ್ರಹಿಸುವ ಸಾವಿರಾರು ಪ್ರಾಮಾಣಿಕ ವ್ಯಕ್ತಿಗಳಿದ್ದಾರೆ. ಅವರ ಕಾರ್ಯ ಸಮಾಜಕ್ಕೆ ಅಮೂಲ್ಯವಾಗಿದೆ. ಈ ಲೇಖನದ ಉದ್ದೇಶ ಅಂತಹ ಸೇವಾ ಕಾರ್ಯಗಳನ್ನು ಪ್ರಶ್ನಿಸುವುದಲ್ಲ. ಬದಲಾಗಿ, ಕೆಲವರು ಧರ್ಮದ ಹೆಸರನ್ನು ದುರುಪಯೋಗಪಡಿಸಿಕೊಂಡು ಮಾಡುವ ವಂಚನೆಗಳಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂಬ ಜಾಗೃತಿ ಮೂಡಿಸುವುದಷ್ಟೇ.

 

✍️ ಬರಹ: ಸುಧಾವಾಣಿ ಸಂಪಾದಕೀಯ