19 June 2025 | Join group

ವಿಶ್ವದ ಅತೀ ಎತ್ತರದ ಜಮ್ಮು ಕಾಶ್ಮೀರದ ಚೆನಾಬ್ ಸೇತುವೆಯ ಬೆನ್ನೆಲುಬು - ಬೆಂಗಳೂರಿನ ವಿಜ್ಞಾನಿ ಜಿ ಮಾಧವಿ ಲತಾ ಅವರ ಅಸಾಧಾರಣ ಸಾಧನೆ

  • 08 Jun 2025 12:38:02 PM

ವಿಶ್ವ ದಾಖಲೆಗೆ ಸೇರಿದ ಮತ್ತು ಅದನ್ನು ಸಾಧ್ಯವಾಗಿಸಿದ ಮಹಿಳಾ ವಿಜ್ಞಾನಿ ಜಿ ಮಾಧವಿ ಲತಾ ಅವರ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇಬೇಕು. ಆಧುನಿಕ ಇಂಜಿನಿಯರಿಂಗ್ ನ ಸಂಕೇತದ ಸೇತುವೆಯ ಯಶಸ್ವಿನ ಹಿಂದೆ ಅವರ ತಂತ್ರಜ್ಞಾನ, ಶ್ರಮ ಮತ್ತು ದೃಢ ನಿಶ್ಚಯವೇ ನಿಲ್ಲುತ್ತಿದೆ.

 

ವಿಶ್ವದಲ್ಲೇ ಅತೀ ಎತ್ತರದ ರೈಲ್ವೆ ಸೇತುವೆಯು ಜಮ್ಮು ಕಾಶ್ಮೀರದ ಚೆನಾಬ್ ನಲ್ಲಿ ಜೂನ್ 06 ರಂದು ಸೇವೆಗೆ ಪಾದಾರ್ಪಣೆ ಮಾಡಲಾಯಿತು. ಪ್ರಧಾನಿ ಮೋದಿಯವರು ಉದ್ಘಾಟಿಸಿದ ಈ ಸೇತುವೆ ಐಫೆಲ್ ಟವರ್‌ಗಿಂತಲೂ ಎತ್ತರವಾಗಿದ್ದು, ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ರೈಲು ಮೂಲಕ ಸಂಪರ್ಕಿಸುತ್ತದೆ.

 

ಚೆನಾಬ್ ಸೇತುವೆ 359 ಮೀ ಎತ್ತರದಲ್ಲಿದೆ ಮತ್ತು 15 ಬಿಲಿಯನ್ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 2005 ರಲ್ಲಿ, ಉತ್ತರ ರೈಲ್ವೆ ಪ್ರೊ. ಲತಾ ಅವರನ್ನು ಪ್ರಮುಖ ಭೂತಾಂತ್ರಿಕ ಸಲಹೆಗಾರರನ್ನಾಗಿ ಇಲ್ಲಿಗೆ ನೇಮಿಸಿಲಾಯಿತು. ಹಿಮಾಲಯವನ್ನು ಪಳಗಿಸುವುದು, ಕಡಿದಾದ ಬಿರುಕು ಬಿಟ್ಟ ಇಳಿಜಾರುಗಳನ್ನು ಸ್ಥಿರಗೊಳಿಸುವುದು ಮತ್ತು ಅಸಾಧ್ಯವಾದ ಕಟ್ಟಡ ನಿರ್ಮಾಣವನ್ನು ಸಾಧ್ಯವಾಗಿಸುವುದು ಅವರ ಮುಖ್ಯ ಕೆಲಸವಾಗಿತ್ತು.

 

ಐಐಟಿ ಮದ್ರಾಸ್‌ನಿಂದ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮತ್ತು ಬೆಂಗಳೂರಿನ ಐಐಎಸ್‌ಸಿಯಲ್ಲಿ ಸಂಶೋಧನಾ ಪದವಿಗಳನ್ನು ಪಡೆದಿರುವ ಅವರು ರಾಕ್(ಬಂಡೆಗಲ್ಲು) ಮೆಕ್ಯಾನಿಕ್ಸ್‌ಗೆ ಹೊಸಬರಾಗಿರಲಿಲ್ಲ.ಅವರು ಅಪಾಯಕಾರಿ ಭೂಪ್ರದೇಶವನ್ನು ಪಾದಯಾತ್ರೆ ಮಾಡಿದರು, ದೋಣಿಯಲ್ಲಿ ನದಿಗಳನ್ನು ದಾಟಿದರು ಮತ್ತು ಭೂಕಂಪನ ಚಟುವಟಿಕೆಗೆ ಹೆಸರುವಾಸಿಯಾದ ಸ್ಥಳದಲ್ಲಿ ಹಿಮಾಲಯದ ಶಿಲೆಯ ಬಿರುಕುಗಳನ್ನು ಅಧ್ಯಯನ ಮಾಡಿದರು.

 

ಹಗಲು ರಾತ್ರಿಯೆನ್ನದೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಲಹೆಗಳನ್ನು ನೀಡುತ್ತಾ ಬಂದಿದ್ದ ಪ್ರೊ. ಲತಾ ಅವರು 17 ವರ್ಷಗಳ ಪ್ರಾಯೋಗಿಕ ಕೆಲಸದ ನಂತರ, ಅಂತಿಮವಾಗಿ 2022 ರಲ್ಲಿ ಪೂರ್ಣಗೊಂಡ ಸೇತುವೆಗೆ ಭೇಟಿ ನೀಡಿದರು - ಸಲಹೆಗಾರರಾಗಿ ಅಲ್ಲ, ಬದಲಾಗಿ ತನ್ನ ಮಕ್ಕಳಿಗೆ ಪರಿಶ್ರಮವು ಏನನ್ನು ನಿರ್ಮಿಸಬಹುದು ಎಂಬುದನ್ನು ತೋರಿಸುವ ಹೆಮ್ಮೆಯ ತಾಯಿಯಾಗಿ.

 

ಇದೀಗ ಸೇತುವೆಯ ಯಶಸ್ವಿ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಉದ್ಘಾಟಿಸಲಾಗಿದ್ದು, ಚೆನಾಬ್ ಸೇತುವೆಯು ಗಂಟೆಗೆ 260 ಕಿ.ಮೀ ವೇಗದ ಗಾಳಿ ಮತ್ತು 8 ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.