10 December 2025 | Join group

ಮೆಲ್ಕಾರ್ ಶರೀಫ್ ಅವರಿಗೆ ಕರ್ನಾಟಕ ರತ್ನ ಶ್ರೀ ಪ್ರಶಸ್ತಿಗೆ ಆಯ್ಕೆ

  • 07 Nov 2025 12:14:29 PM

ಬಂಟ್ವಾಳ: ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ತರಕಾರಿ ವಿತರಣೆ ಮಾಡುವ ಮೆಲ್ಕಾರ್ ನ ತರಕಾರಿ ವ್ಯಾಪಾರಿ ಮಹಮ್ಮದ್ ಶರೀಫ್ ಅವರಿಗೆ ರಾಜ್ಯಮಟ್ಟದ ‘ಕರ್ನಾಟಕ ರತ್ನ ಶ್ರೀ’ ಪ್ರಶಸ್ತಿ ದೊರಕಿದೆ.

 

ವಸಂತಲಕ್ಷ್ಮಿ ಫೌಂಡೇಶನ್, ಸಂಜಯನಗರ ಬೆಂಗಳೂರು ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಸದಾಶಿವನಗರದ ವೀರಶೈವ ಸಭಾಭವನದಲ್ಲಿ ಇದೇ ರವಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಒಟ್ಟು 20 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇವರಲ್ಲಿ ಮಹಮ್ಮದ್ ಶರೀಫ್ ಅವರು ಒಬ್ಬರಾದರು. ಈಗಾಗಲೇ ಅವರಿಗೆ ಸಾಮಾಜಿಕ ಸೇವೆಗೆ ಸಂಬಂಧಿಸಿದ ಹಲವು ಪ್ರಶಸ್ತಿಗಳು ಲಭಿಸಿವೆ.

 

ಈ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಸಾಹಿತ್ಯಗಾರ ನಾಡೋಜ ಡಾ. ಕುಂಬಾರ್ ವೀರಭದ್ರಪ್ಪ, ಮಾಜಿ ಸಚಿವ ವರ್ತೂರ್ ಪ್ರಕಾಶ್, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಿತ್ರನಟ ವಿ. ಮನೋಹರ್ ಮತ್ತು ಚಿತ್ರನಟಿ ರೇಖಾ ದಾಸ್ ಪ್ರಶಸ್ತಿ ಪ್ರಧಾನ ಮಾಡುವರು ಎಂದು ವಸಂತಲಕ್ಷ್ಮಿ ಫೌಂಡೇಶನ್ ಕಾರ್ಯದರ್ಶಿ ಕೆ. ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.