ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ ಭೀಕರ ಕಾರ್ ಬ್ಲಾಸ್ಟ್‌ನಲ್ಲಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೆಟ್ರೋ ನಿಲ್ದಾಣದ ಗೇಟ್ ನಂ.1 ಬಳಿ ನಿಂತಿದ್ದ ಕಾರು ಏಕಾಏಕಿ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಹಲವಾರು ವಾಹನಗಳು ಹೊತ್ತಿ ಉರಿದಿವೆ.
ತಾಜಾ ಮಾಹಿತಿಯ ಪ್ರಕಾರ, ಜಮ್ಮು–ಕಾಶ್ಮೀರದ ಪುಲ್ವಾಮ ಮೂಲದ ಡಾಕ್ಟರ್ ಉಮರ್ ತನ್ನ ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಓಡಾಡಿ ಕೊನೆಗೆ ಕೆಂಪುಕೋಟೆ ಬಳಿ ಸ್ಫೋಟಗೊಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಸ್ಫೋಟಗೊಂಡ HR 26 CE 7674 ಸಂಖ್ಯೆಯ i20 ಕಾರು ಮೊಹಮ್ಮದ್ ಸಲ್ಮಾನ್ ಎಂಬಾತನ ಹೆಸರಿನಲ್ಲಿ ಹರಿಯಾಣದಲ್ಲಿ ನೋಂದಾಯಿತವಾಗಿತ್ತು. ಗುರುಗ್ರಾಮದ ಶಾಂತಿನಗರದ ನಿವಾಸಿ ಸಲ್ಮಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಾರು ಪುಲ್ವಾಮ ಮೂಲದ ತಾರೀಕ್ ಎಂಬಾತನಿಗೆ ಸೇರಿದದ್ದಾಗಿ ಪತ್ತೆಯಾಗಿದೆ.
ಈ ಬೆಳವಣಿಗೆ ಪ್ರಕರಣಕ್ಕೆ ಪುಲ್ವಾಮಾ ನಂಟು ಇರುವ ಸಾಧ್ಯತೆಯನ್ನು ಬಲಪಡಿಸಿದ್ದು, ತನಿಖಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ. ದೆಹಲಿ ಪೊಲೀಸರು ತಾರೀಕ್‌ನ ಜಾಡಿಗಾಗಿ ಪುಲ್ವಾಮಗೆ ತೆರಳಿದ್ದಾರೆ. ಸಲ್ಮಾನ್ ನ್ನು ವಶಕ್ಕೆ ತೆಗೆದುಕೊಂಡು ಸ್ಫೋಟದ ಕಾರಣ, ಉದ್ದೇಶ ಮತ್ತು ಪಿತೂರಿ ಕುರಿತು ವಿಚಾರಣೆ ಮುಂದುವರಿಸಿದ್ದಾರೆ. ಎಫ್‌ಎಸ್‌ಎಲ್, ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳು ಸಹ ಸ್ಥಳದಲ್ಲಿ ತನಿಖೆ ನಡೆಸುತ್ತಿವೆ.
ಈ ಪ್ರಕರಣದಲ್ಲಿ ಉನ್ನತ ಶಿಕ್ಷಣ ಪಡೆದ ವೈದ್ಯನೇ (ಡಾಕ್ಟರ್ ಉಮರ್) ಸ್ಫೋಟಕ ಕೃತ್ಯದಲ್ಲಿ ಭಾಗಿಯಾಗಿರುವುದರಿಂದ, ಉಗ್ರ ಸಂಘಟನೆಗಳು ಈಗ ಶಿಕ್ಷಣ ಪಡೆದ ವ್ಯಕ್ತಿಗಳನ್ನು ಸಹ ತಮ್ಮ ಜಾಲಕ್ಕೆ ಸೆಳೆಯುತ್ತಿರುವ ಆತಂಕಕಾರಿ ಪ್ರವೃತ್ತಿ ಬೆಳಕಿಗೆ ಬಂದಿದೆ. ಸಮಾಜದಲ್ಲಿ ಗೌರವ ಪಡೆದ ವೃತ್ತಿಪರರೂ ಇಂತಹ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಿರುವುದು ತನಿಖಾ ಸಂಸ್ಥೆಗಳಿಗೆ ಹೊಸ ಸವಾಲಾಗಿದೆ.





