ದೆಹಲಿ: ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟ ಉಗ್ರ ಡಾ. ಉಮರ್ ನಬಿ ಮನೆಯನ್ನು ಜಮ್ಮು–ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಯವರು ಬುಧವಾರ ರಾತ್ರಿ ಮತ್ತು ಗುರುವಾರ ಮಧ್ಯರಾತ್ರಿ ನಡುವಿನ ವೇಳೆಯಲ್ಲಿ ಕೆಡವಿದ್ದಾರೆ ಎಂದು ವರದಿಯಾಗಿದೆ.
ಹುಂಡೈ i20 ಕಾರಿನಲ್ಲಿ ಸ್ಫೋಟಕ ತುಂಬಿ ಸ್ಫೋಟ ನಡೆದ ವೇಳೆ, ಆ ಕಾರನ್ನು ಚಲಾಯಿಸುತ್ತಿದ್ದವ ಡಾ. ನಬಿಎಂಬುದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿದೆ. ಸ್ಫೋಟ ಸ್ಥಳದಿಂದ ಪಡೆದ ಮಾದರಿಗಳು, ಆತನ ತಾಯಿಯ ಡಿಎನ್ಎ ಮಾದರಿಗಳೊಂದಿಗೆ ನಿಖರವಾಗಿ ಹೊಂದಿವೆ ಎಂದು ತನಿಖಾ ಅಧಿಕಾರಿಗಳು ‘ದಿ ಹಿಂದು’ ಗೆ ತಿಳಿಸಿದ್ದಾರೆ ಎಂದು ವರದಿ ಮಾಡಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದ ಡಾ. ನಬಿ, ಕಳೆದ ಎರಡು ವರ್ಷಗಳಲ್ಲಿ ತೀವ್ರಗಾಮಿಯಾಗಿದ್ದಎಂಬ ಆರೋಪವಿದೆ. ಹಲವಾರು ತೀವ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಾಜಿಕ ಜಾಲ ತಾಣ ಗುಂಪುಗಳಲ್ಲಿ ಆತ ಸೇರ್ಪಡೆಗೊಂಡಿದ್ದ ಎಂಬುದನ್ನೂ ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ.
ಭದ್ರತಾ ಇಲಾಖೆ ನಡೆಸಿದ ತನಿಖೆಯ ನಂತರ, ಭಯೋತ್ಪಾದನೆಗೆ ಸಂಬಂಧಿಸಿದ ಸಾಕ್ಷ್ಯಗಳು ದೊರಕಿದ ಹಿನ್ನೆಲೆಯಲ್ಲಿ, ಉಗ್ರ ನಬಿಯ ಮನೆ ಕೆಡವುವ ಕ್ರಮ ಕೈಗೊಳ್ಳಲಾಗಿದೆ.





