ವಿಟ್ಲ: 'ಬೆಳೆವ ಸಿರಿ ಮೊಳಕೆ'ಯಲ್ಲಿ ಎಂಬ ಮಾತಿನಂತೆ ಇಲ್ಲಿನ ನಾಲ್ವರು ಮಕ್ಕಳು ತಮ್ಮ ಬಾಲ್ಯವೆಂಬ ಮೊಳಕೆಯಲ್ಲಿಯೇ ಬದುಕಿನ ಬೆಳೆಯನ್ನು ತೆಗೆದು ಮಾದರಿಯಾಗಿದ್ದಾರೆ.
ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರು ಎಂಬುದು ಕಲೆಂಜಿಮಲೆ ಎಂಬ ರಕ್ಷಿತಾರಣ್ಯದ ಹಸಿರ ತಪ್ಪಲಿನಲ್ಲಿರುವ ಸಣ್ಣ ಊರು. ಊರಿನ ಹೆಬ್ಬಾಗಿಲಿನಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಪುಣ್ಯ ಸನ್ನಿಧಿಯಿದೆ. ಪರಮ ಪೂಜ್ಯ ಮಹಾಭಲೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ಕ್ಷೇತ್ರ ಧಾರ್ಮಿಕ, ಸಾಮಾಜಿಕ, ಶ್ರದ್ದಾ ಕೇಂದ್ರವಾಗಿ ಬೆಳಗುತ್ತಿದೆ.
ಈ ಕ್ಷೇತ್ರದ ಎದುರಿನ ಹೊರ ಭಾಗದಲ್ಲಿ ನೆರೆಹೊರೆಯ ಮಕ್ಕಳ ನಿತ್ಯ ಭೇಟಿ. ಧನ್ವಿನ್, ವೇದಾಂತ್, ಹಾರ್ಧಿಕ್, ಹರ್ಷಿಕಾ ಎಂಬ ಈ ನಾಲ್ಕು ಜನ ಮಕ್ಕಳಿಗೆ, ಮಳೆಗಾಲ ಬಂತೆಂದರೆ ನೀರಿನ ಹರಿಯುವ ಭಾಗದಲ್ಲಿ ಗುಂಡಿ ತೋಡಿ ಗಿಡ ನೆಡುವುದೇ ಇವರ ಪ್ರಧಾನ ಆಟವಾಗಿತ್ತು. ಕಳೆದ ಬಾರಿಯ ಮಳೆಗಾಲದಲ್ಲಿ ನಾವು ಭತ್ತ ಬೆಳೆಯುವ ಎಂಬ ಆಲೋಚನೆಯನ್ನು ಮಾಡಿದಾಗ, ಇದಕ್ಕೆ ಮೊದಲಿಗನಾಗಿ ನಿಂತವನು ಧನ್ವಿನ್ ಎಂಬ ಹುಡುಗ ಇವನ ಮಾವ ಹಿರಿಯರಾದ ವಾಮನ ಪೂಜಾರಿಯವರು ಈ ಮಕ್ಕಳಿಗೆ ಬೆಂಬಲವಾಗಿ ನಿಂತರು.
ಪ್ರಾಯೋಗಿಕವಾಗಿ ಕ್ಷೇತ್ರದ ಎದುರು ಭಾಗದಲ್ಲಿ ಒಂದು ಹಿಡಿ ಬೀಜ ಬಿತ್ತಿದ ಮಕ್ಕಳು, ಶ್ರೀ ಕ್ಷೇತ್ರದಲ್ಲಿ ತೆನೆ ತುಂಬಿಸುವ ಪುಣ್ಯ ದಿನದಂದು ಈ ಮಕ್ಕಳು ಬೆಳೆಸಿದ ಭತ್ತದ ಒಂದು ಹಿಡಿ ತೆನೆಯನ್ನು ಬಹಳ ಖುಷಿಯಿಂದ ದೇವಿಗೆ ಸಮರ್ಪಿಸಿದರು. ಸ್ವಾಮೀಜಿ ಯವರು ಮಕ್ಕಳನ್ನು ಪ್ರೆರೇಪಿಸಿದರು.
ಇದರಿಂದ ಪ್ರೇರಣೆಗೊಂಡ ಮಕ್ಕಳು ಈ ಬಾರಿಯೂ ತಾವು ಭತ್ತ ಬೆಳೆಯೋಣ ಎಂದು ಮಾತಾಡಿಕೊಂಡು ಕಳೆದ ಬಾರಿಗಿಂತ ಸ್ವಲ್ಪ್ ಜಾಸ್ತಿ ಬೀಜ ಬಿತ್ತಿದರು. ಜಡಿಮಳೆಯಲ್ಲೂ ಪ್ರತೀ ದಿನ ಅದನ್ನು ವೀಕ್ಷಿಸುತ್ತಾ, ಸಂಭ್ರಮ ಪಟ್ಟರು. ಕೊನೆಗೆ ಮಕ್ಕಳ ಆಸೆಯಂತೆ ಪೈರು ತುಂಬಿ ಕಟಾವಿಗೆ ಸಿದ್ದವಾಗಿತ್ತು. ಮಕ್ಕಳೆಲ್ಲಾ ಬಹಳ ಸಂಭ್ರಮದಿಂದ ಪೈರು ಕಟಾವಿನಲ್ಲಿ ಭಾಗಿಯಾದರು.
ಅನ್ನಪೂರ್ಣೇಶ್ವರಿಯ ನೆಲೆ ಎಲ್ಲಿ ಇರುತ್ತದೋ ಆ ಜಾಗ ಬರಡು ಬೂಮಿ ಆಗಿದ್ದರೂ, ಹಸಿರಿಂದ ಕಂಗೊಳಿಸುವಂತೆ ಮಾಡುವ ಶಕ್ತಿ ಆ ಅಮ್ಮನಿಗೆ ಇದೆ ಎನ್ನುವುದಕ್ಕೆ ಮಕ್ಕಳ ಮೂಲಕ ಸಾಕ್ಷಿ ನೀಡಿದ್ದಾಳೆ ತಾಯಿ. ಈ ದಿನ ಮಕ್ಕಳು ಸುತ್ತಮುತ್ತಲಿನ , ಹಿರಿಯರು,ಮಕ್ಕಳ ಜೊತೆ ಸೇರಿ ಪೈರನ್ನು ಕೊಯ್ದು ಸಂಭ್ರಮ ಪಟ್ಟರು. ಮಕ್ಕಳ ಪ್ರತೀ ಚಟುವಟಿಕೆಯಲ್ಲಿ ಮನೆಯವರ, ಪ್ರೋತ್ಸಾಹವೂ ಇತ್ತು. ಮುಂದಿನ ಬಾರಿಗೆ ಬೀಜಕ್ಕಾಗಿ ಈ ಭತ್ತವನ್ನು ಸಂಗ್ರಹಿಸಿಟ್ಟು ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಳೆ ತೆಗೆಯುವ ಯೋಜನೆಯಲ್ಲಿದ್ದಾರೆ ಈ ಮಕ್ಕಳು.
ಇವರಲ್ಲಿ ಧನ್ವಿನ್ ಶ್ರೀ ಗುರುದೇವ ಶಿಕ್ಷಣ ಸಂಸ್ಥೆ ಒಡಿಯೂರು, ವೇದಾಂತ್ ಮತ್ತು ಹಾರ್ಧಿಕ್ ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ, ಹಾಗೂ ಹರ್ಷಿಕಾ ಸೆಂಟ್ ರೀಟಾ ಶಿಕ್ಷಣ ಸಂಸ್ಥೆ ವಿಟ್ಲ ಇಲ್ಲಿನ ವಿದ್ಯಾರ್ಥಿಗಳಾಗಿದ್ದಾರೆ.
ಇವತ್ತಿನ ಕಾಲಘಟ್ಟದಲ್ಲಿ ದೊಡ್ಡ ದೊಡ್ಡ ಡಿಗ್ರಿ ಪಡೆದು ಉದ್ಯೋಗ ಇಲ್ಲದೆ ಕಷ್ಟಪಡುವ ಬದಲು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕೃಷಿಯ ಉತ್ತೇಜನ ಕೊಟ್ಟು ಒಬ್ಬ ಉತ್ತಮ ಕೃಷಿಕನಾಗಿ ಮಾಡಿ ಸ್ವಾವಲಂಬಿ ಬದುಕು ಸಾಧಿಸಲು ಪ್ರೇರೇಪಿಸುವ ಅಗತ್ಯತೆ ಇದೆ ಎನ್ನುತ್ತಾರೆ ಪ್ರಸಿದ್ಧ ನಿರೂಪಕಿ ರೇಣುಕಾ ಕಣಿಯೂರು.





