ಹೈದರಾಬಾದ್: ಸೌದಿ ಅರೇಬಿಯಾದ ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರನ್ನು ಹೊತ್ತಿದ್ದ ಬಸ್ ಸೋಮವಾರ ಮುಂಜಾನೆ ಡೀಸೆಲ್ ಟ್ಯಾಂಕರ್‌ಗೆ ಗುದ್ದಿದ ಪರಿಣಾಮ ದೊಡ್ಡ ದುರಂತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯಂತೆ ಕನಿಷ್ಠ 42 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಅಪಘಾತವು ಭಾರತೀಯ ಕಾಲಮಾನ 1:30ರ ಸುಮಾರಿಗೆ ಮುಫರಹತ್ ಎಂಬ ಪ್ರದೇಶದ ಬಳಿ ನಡೆದಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಮಹಿಳೆಯರು, ಮಕ್ಕಳು ಮತ್ತು ಹೈದರಾಬಾದ್‌ನ ಅನೇಕ ಯಾತ್ರಿಕರು ಬಲಿಯಾದವರ ಪಟ್ಟಿಯಲ್ಲಿ ಇದ್ದಾರೆ. ಆರಂಭಿಕ ಅಂದಾಜಿನಂತೆ, ದುರಂತಕ್ಕೆ ಒಳಗಾದ ಬಸ್‌ನಲ್ಲಿ ಸುಮಾರು 20 ಮಹಿಳೆಯರು ಮತ್ತು 11 ಮಕ್ಕಳು ಪ್ರಯಾಣಿಸುತ್ತಿದ್ದರು.
ಯಾತ್ರಿಕರು ಮೆಕ್ಕಾದಲ್ಲಿ ಉಮ್ರಾ ವಿಧಿಗಳನ್ನು ಮುಗಿಸಿ ಮದೀನಾಕ್ಕೆ ಹೊರಟಿದ್ದು, ಅಪಘಾತ ಸಂಭವಿಸಿದ ಸಮಯದಲ್ಲಿ ಅನೇಕರು ನಿದ್ರೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಸ್ಥಳೀಯ ಮೂಲಗಳು ಈಗಾಗಲೇ 42 ಸಾವುಗಳನ್ನು ವರದಿ ಮಾಡಿದ್ದರೂ, ಅಧಿಕಾರಿಗಳು ಇನ್ನೂ ಬಲಿಯಾದವರ ನಿಖರ ಸಂಖ್ಯೆ ಮತ್ತು ಗಾಯಾಳುಗಳ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ತುರ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದು, ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.





