10 December 2025 | Join group

ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಶೀಘ್ರವೇ ಎಐ ‘ಒನ್-ಕ್ಲಿಕ್‌ ಅಟೆಂಡೆನ್ಸ್’; ಹಾಜರಾತಿ ಟಿಕ್‌ ಮಾಡುವ ಪದ್ಧತಿಗೆ ತೆರೆ

  • 19 Nov 2025 10:21:37 AM

ಬೆಂಗಳೂರು: ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಗಾಗಿ ಹೆಸರು ಕೂಗಿ ಅಟೆಂಡೆನ್ಸ್ ಪುಸ್ತಕದಲ್ಲಿ ಟಿಕ್ ಮಾಡುವ ಪಾರಂಪರಿಕ ಪದ್ಧತಿ ಇನ್ನೇನು ಇತಿಹಾಸವಾಗಲಿದೆ. ಕಾರಣ – ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಒನ್ ಕ್ಲಿಕ್ ಅಟೆಂಡೆನ್ಸ್ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

 

ರಾಜ್ಯದ ಇ-ಗವರ್ನೆನ್ಸ್ ಇಲಾಖೆ ಅಭಿವೃದ್ಧಿಪಡಿಸಿರುವ ಈ ಎಐ ಆಧಾರಿತ ಹಾಜರಾತಿ ತಂತ್ರಜ್ಞಾನವನ್ನು ಈಗಾಗಲೇ ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಪ್ರಯೋಗಾತ್ಮಕವಾಗಿ ಬಳಸಿ ಅಧ್ಯಯನ ಮಾಡಲಾಗುತ್ತಿದೆ. ಅಗತ್ಯ ಸುಧಾರಣೆ ಹಾಗೂ ಬದಲಾವಣೆಗಳನ್ನು ಮಾಡುತ್ತಿರುವ ಬಳಿಕ ಹಂತ ಹಂತವಾಗಿ ಇತರೆ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು.

 

ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ರಾಜ್ಯ ಸರ್ಕಾರದ ಇ-ಗವರ್ನೆನ್ಸ್ ಇಲಾಖೆ ಈ ಹೊಸ ಯೋಜನೆಯನ್ನು ಸಾರ್ವಜನಿಕರಿಗೆ ಪರಿಚಯಿಸಿದೆ. ಈಗಾಗಲೇ ಸರ್ಕಾರದ 18 ಇಲಾಖೆಗಳಲ್ಲೂ ಮುಖ ಗುರುತಿನ ಆಧಾರಿತ ಮೊಬೈಲ್ ವರ್ಕ್ ಅಟೆಂಡೆನ್ಸ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಅನುಭವದ ಮೇಲೆ, ಶಾಲೆ-ಕಾಲೇಜುಗಳಿಗೂ ಈ ತಂತ್ರಜ್ಞಾನವನ್ನು ತರಲು ಸರ್ಕಾರ ಮುಂದಾಗಿದೆ.

 

ಹೊಸ ವ್ಯವಸ್ಥೆಯ ಜಾರಿಗೆ ಹಾಜರಾತಿ ನೋಂದಣಿ ಪ್ರಕ್ರಿಯೆ ಸುಗಮವಾಗುತ್ತಿದ್ದು, ಶಿಕ್ಷಕರ ಸಮಯ ಉಳಿತಾಯವಾಗಿ ಬೋಧನೆಗೆ ಹೆಚ್ಚಿನ ಅವಕಾಶ ಸಿಗಲಿದೆ. ಹಾಜರಾತಿ ದಾಖಲಾತಿಯಲ್ಲಿ ಪಾರದರ್ಶಕತೆ ಹೆಚ್ಚಾಗುವ ಜೊತೆಗೆ, ವಿದ್ಯಾರ್ಥಿಗಳಿಗೆ ಒದಗಿಸುವ ಮಧ್ಯಾಹ್ನದ ಊಟ (mid-day meal) ಹಾಗೂ ಇತರೆ ಸೌಲಭ್ಯಗಳ ನಿಖರ ಲೆಕ್ಕವನ್ನೂ ಸುಲಭವಾಗಿ ನಿರ್ವಹಿಸಬಹುದಾಗಿದೆ.