31 January 2026 | Join group

ಕಾಲ್ತುಳಿತ ಪ್ರಕರಣ: ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ವಿರುದ್ಧ ಆರೋಪಪಟ್ಟಿಗೆ ಸಿಐಡಿ ಸಿದ್ಧ

  • 20 Nov 2025 08:30:27 PM

ಬೆಂಗಳೂರು: ಐಪಿಎಲ್ ವಿಜಯೋತ್ಸವದ ವೇಳೆ 11 ಜನರು ಸಾವನ್ನಪ್ಪಿದ ದುರಂತ ಕಾಲ್ತುಳಿತ ಪ್ರಕರಣದಲ್ಲಿ ಸಿಐಡಿ ತನಿಖೆಯನ್ನು ಪೂರ್ಣಗೊಳಿಸಿದೆ. ಆರ್‌ಸಿಬಿ ಫ್ರಾಂಚೈಸಿ, ಡಿಎನ್‌ಎ ಈವೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಕೆಎಸ್‌ಸಿಎ ವಿರುದ್ಧ 2,200 ಪುಟಗಳ ಆರೋಪಪಟ್ಟಿ ಸಲ್ಲಿಸಲು ಸಿದ್ದತೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಸಿಐಡಿ ನೂರಾರು ಪ್ರತ್ಯಕ್ಷದರ್ಶಿಗಳ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಮತ್ತು ಗಾಯಗೊಂಡವರ ಹೇಳಿಕೆಗಳನ್ನು ಸಂಗ್ರಹಿಸಿದೆ. ತನಿಖಾಧಿಕಾರಿಗಳ ಪ್ರಕಾರ, ವಿಜಯೋತ್ಸವವನ್ನು ಅಗತ್ಯ ಅನುಮತಿಗಳಿಲ್ಲದೆ ಆಯೋಜಿಸಿರುವುದು ದುರಂತಕ್ಕೆ ಕಾರಣವಾಗಿದೆ.

 

ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಜೂನ್ 4, 2025 ರಂದು ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಅಭಿಮಾನಿಗಳ ಭಾರೀ ಜನಸಂದಣಿ ಕಾಲ್ತುಳಿತಕ್ಕೆ ಕಾರಣವಾಗಿದ್ದು, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 11 ಮಂದಿ ಮೃತಪಟ್ಟಿದ್ದರು.

 

ಆರ್‌ಸಿಬಿ ಪ್ರತಿಯೊಬ್ಬ ಮೃತರ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರವನ್ನು ‘RCB Cares’ ಉಪಕ್ರಮದಡಿ ಘೋಷಿಸಿದೆ ಮತ್ತು ರಾಜ್ಯ ಸರಕಾರ ಕೂಡ ಪರಿಹಾರ ನೀಡಿದೆ.