ಬೆಂಗಳೂರು: ಕರ್ನಾಟಕ ಸರ್ಕಾರವು ಬೋಧನಾ ಸಿಬ್ಬಂದಿಯ ವೇತನ ಪಾವತಿಯನ್ನು ವಿಳಂಬ ಮಾಡಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ಕಠಿಣ ಅಸಮಾಧಾನ ವ್ಯಕ್ತಪಡಿಸಿದೆ. ಶಿಕ್ಷಣ ಇಲಾಖೆಯು 19 ತಿಂಗಳಿನಿಂದ ಸಂಬಳ ಬಿಡುಗಡೆ ಮಾಡದಿರುವುದರಿಂದ, ವೇತನ ಪಾವತಿಗೆ ಸಂಬಂಧಿಸಿ ನಿರ್ದೇಶನ ನೀಡುವಂತೆ ಕೋರಿ ಅನಿ ಎಂ. ಕನವಾಡೆ ಸೇರಿದಂತೆ ಐವರು ಶಿಕ್ಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ, ಶಿಕ್ಷಕರ ವೇತನವನ್ನು ತತ್‌ಕ್ಷಣ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವೇತನ ನೀಡದೇ ಕೆಲಸಕ್ಕೆ ಒತ್ತಾಯಿಸುವುದು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಅಮಾನ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. “ಸರ್ಕಾರವು ಕಾನೂನುಬದ್ಧ ಜವಾಬ್ದಾರಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಸಂಬಳ ಕೇಳಿ ಶಿಕ್ಷಕರು ಚಾತಕಪಕ್ಷಿಗಳಂತೆ ಕಾಯಬೇಕಾದ ಪರಿಸ್ಥಿತಿ ಬರಬಾರದು,” ಎಂದು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷವಾದ ಬಿಜೆಪಿ ಕೂಡ ಸರ್ಕಾರದ ವಿರುದ್ಧ ಕಿಡಿಕಾರಿದ್ದು, “ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಕಲ್ಯಾಣ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹೈಕೋರ್ಟ್ ಮಧ್ಯ ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಅಸಮರ್ಥತನದ ಸಂಕೇತ,” ಎಂದು ಬಿಜೆಪಿ ನಾಯಕರು ಆರೋಪಿಸಿದರು.
ನ್ಯಾಯಾಲಯವು ಪ್ರತಿಯೊಬ್ಬ ಅರ್ಜಿದಾರರಿಗೆ ಬಾಕಿಯಿರುವ ಸುಮಾರು ₹12 ಲಕ್ಷ ಸಂಬಳವನ್ನು ಡಿಸೆಂಬರ್ 4ರೊಳಗೆ ಪಾವತಿಸುವಂತೆ ನಿರ್ದೇಶಿಸಿದೆ. ಗಡುವಿನೊಳಗೆ ಸಂಬಳ ನೀಡದಿದ್ದರೆ, ಪ್ರತಿ ಅರ್ಜಿದಾರರಿಗೂ ₹25,000 ವ್ಯಾಜ್ಯ ವೆಚ್ಚವನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿದೆ.
'ಅರ್ಜಿದಾರರು ಪ್ರತಿವಾದಿ ದೇಶಭೂಷಣ ಶಾಲೆಯಲ್ಲಿ 2023ರಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು, ಮೇ 2024 ರಿಂದ ಸುಮಾರು 19 ತಿಂಗಳು ವೇತನ ಪಡೆದಿಲ್ಲ. ಆದ್ದರಿಂದ ಸಂಬಳವಿಲ್ಲದೆ ಕೆಲಸ ಮಾಡಲು ಬಲವಂತಪಡಿಸುವುದು ಸಂವಿಧಾನದ 23ನೇ ವಿಧಿಯ ಸ್ಪಷ್ಟ ಉಲ್ಲಂಘನೆ' ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಾಜ್ಯದಾದ್ಯಂತ 18,000 ಶಿಕ್ಷರನ್ನು ನೇಮಕ ಮಾಡಲಾಗುವುದು ಎಂದು ಘೋಷಿಸಿದ್ದಾರೆ ಎಂಬುವುದು ಗಮನಾರ್ಹ ವಿಷಯವಾಗಿದೆ.





