10 December 2025 | Join group

ತಾಯಿಯ ಎದೆಹಾಲಿನಲ್ಲಿ ಯುರೇನಿಯಂ–238 ಪತ್ತೆ: ಶಿಶುಗಳಿಗೆ ಗಂಭೀರ ಆರೋಗ್ಯ ಅಪಾಯ ಎಚ್ಚರಿಕೆ!

  • 24 Nov 2025 11:09:59 AM

ಪಾಟ್ನಾ: ತಾಯಿಯ ಎದೆಹಾಲು ಶಿಶುಗಳಿಗೆ ಅಮೃತದಂತೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ, ಸಂಶೋಧನಾ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ತಾಯಿಯ ಎದೆಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆಯಾದ ದಾರುಣ ಮಾಹಿತಿ ಬಹಿರಂಗವಾಗಿದೆ.

 

ಬಿಹಾರದ ಆರು ಜಿಲ್ಲೆಗಳಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ನವಜಾತ ಶಿಶುಗಳಿಗೆ ತಾಯಿಯ ಹಾಲೇ ವಿಷಕಾರಿ ಆಗುತ್ತಿರುವ ಸಾಧ್ಯತೆ ಕಂಡುಬಂದಿದೆ.

 

ನವದೆಹಲಿಯ ಏಮ್ಸ್‌ ಸಹಯೋಗದೊಂದಿಗೆ ಪಾಟ್ನಾದ ಮಹಾವೀರ ಕ್ಯಾನ್ಸರ್‌ ಸಂಸ್ತಾನದ ಜೀವರಸಾಯನಶಾಸ್ತ್ರ ವಿಭಾಗದ ಡಾ. ಅಶೋಕ್ ಶರ್ಮಾ ಅವರ ನೇತೃತ್ವದಲ್ಲಿ ಈ ಅಧ್ಯಯನ ಮಾಡಲಾಗಿದೆ. ಡಾ. ಅರುಣ್ ಕುಮಾರ್ ಮತ್ತು ಪ್ರೊಫೆಸರ್ ಅಶೋಕ್ ಘೋಷ್ ಸಂಶೋಧನಾ ತಂಡದಲ್ಲಿ ಸೇರಿದ್ದರು.

 

ಭೋಜ್‌ಪುರ, ಸಮಸ್ತಿಪುರ, ಬೇಗುಸರಾಯ್, ಖಗಾರಿಯಾ, ಕತಿಹಾರ್ ಮತ್ತು ನಳಂದಾ ಜಿಲ್ಲೆಗಳ 17ರಿಂದ 35 ವರ್ಷದ 40 ಮಹಿಳೆಯರ ಎದೆಹಾಲಿನ ಮಾದರಿಗಳನ್ನು ಪರೀಕ್ಷಿಸಿದಾಗ ತಂಡ ಬೆಚ್ಚಿಬಿದ್ದಿದೆ.

 

ಒಟ್ಟು 40 ಮಾದರಿಗಳಲ್ಲಿಯೂ ಯುರೇನಿಯಂ–238 ಕಣಗಳು ಪತ್ತೆಯಾಗಿವೆ. ಇಂತಹ ಹಾಲು ಸೇವಿಸಿದ ಶೇ.70ರಷ್ಟು ಮಕ್ಕಳಲ್ಲಿ ಕ್ಯಾನ್ಸರ್‌ ಹೊರತುಪಡಿಸಿ ಗಂಭೀರ ಸ್ವರೂಪದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ. ಶಿಶುಗಳಲ್ಲಿ ಕಿಡ್ನಿ ಸಮಸ್ಯೆ, ನರಸಂಬಂಧಿತ ಅಸೌಖ್ಯ ಹಾಗೂ ಇತರ ದೀರ್ಘಕಾಲೀನ ಸಮಸ್ಯೆಗಳ ಅಪಾಯ ಹೆಚ್ಚಿದೆ. ಈ ಅಪಾಯ ತಾಯಿಗಿಂತ ಮಕ್ಕಳಲ್ಲೇ ಬಹಳ ಹೆಚ್ಚು ಎನ್ನಲಾಗಿದೆ.