10 December 2025 | Join group

ಇಂದಿಗೆ 17 ವರ್ಷಗಳು ಮುಂಬೈ ದಾಳಿಯಾಗಿ: ASI ತುಕಾರಾಂ ಓಂಬ್ಳೆ ಅವರ 'ಧೈರ್ಯ' ಅಜರಾಮರ

  • 26 Nov 2025 10:34:40 AM

ಮುಂಬೈ: 17 ವರ್ಷಗಳ ಹಿಂದೆ, ನವೆಂಬರ್ 26, 2008 ರಂದು. ಮುಂಬೈ ತನ್ನ ಸಾಮಾನ್ಯ ಗದ್ದಲದಲ್ಲಿ ಹೆಜ್ಜೆ ಹಾಕುತ್ತಿದ್ದ ಅವು ಕೊನೆಯ ಕ್ಷಣಗಳು. ಆದರೆ ಕೆಲವೇ ಗಂಟೆಗಳಲ್ಲಿ, ಅದರ ಬೀದಿಗಳಲ್ಲಿ ಭಯ, ಬೆಂಕಿ ಮತ್ತು ರಕ್ತದ ವಾತಾವರಣ ಆವರಿಸಿತು. ದೇಶದ ಹೃದಯಕ್ಕೆ ನೇರವಾಗಿ ಹೊಡೆದಂತಹ ದಾಳಿ ಅಂದು ನಡೆದಿತ್ತು.

 

ಆ ಕ್ಷಣದಲ್ಲಿ, ನಗರದಲ್ಲಿ ಒಬ್ಬ ವ್ಯಕ್ತಿಯ ಎದೆ ಮಾತ್ರ ಅಚಲವಾಗಿ ನಿಂತಿತ್ತು—ಎಎಸ್‌ಐ (ASI) ತುಕಾರಾಂ ಓಂಬ್ಳೆ. ಅವರು ಸಾಮಾನ್ಯ ಪೊಲೀಸ್ ಅಧಿಕಾರಿ ಆಗಿರಲಿಲ್ಲ. ಅವರ ಕಣ್ಣುಗಳಲ್ಲಿ ಯಾವಾಗಲೂ ಕರ್ತವ್ಯ, ಅವರ ನಡೆಯಲ್ಲಿ ದೇಶದ ಸುರಕ್ಷತೆಯ ಕಾಳಜಿ ತುಂಬಿತ್ತು. ಆದರೆ ಆ ರಾತ್ರಿ, ಅವರು ಕೇವಲ ಪೊಲೀಸ್ ಆಗಿರಲಿಲ್ಲ—ಅವರು ನಗರ ಮತ್ತು ನೂರಾರು ಅಮಾಯಕ ಜೀವಗಳ ನಡುವೆ ನಿಂತಿದ್ದ ಕೊನೆಯ ಗೋಡೆಯಾಗಿದ್ದರು.

 

ಸ್ಕೋಡಾ ಕಾರಿನಲ್ಲಿ ಇಬ್ಬರು ಭಯೋತ್ಪಾದಕರು ಓಡಿಹೋಗುತ್ತಿದ್ದರು. ಸುತ್ತಮುತ್ತ ಕತ್ತಲೆ ಆವರಿಸಿತ್ತು. ಆದರೆ, ASI ತುಕಾರಾಂ ಕೈಯಲ್ಲಿ ಜ್ಯೋತಿ ಬೆಳಗಿಸಿದಂತೆ ಒಂದು ಟಾರ್ಚ್‌ ಪ್ರಕಾಶಿಸಿತು. ತಕ್ಷಣ ಭಯೋತ್ಪಾದಕ ಕಸಬ್ AK-47 ಎತ್ತಿ ಗುಂಡು ಹೊರಡಿಸಿದ. ತುಕಾರಾಂ ಮುಂದೆ ನಿಂತರು, ತಮ್ಮ ಸಹೋದ್ಯೋಗಿಗಳಿಗೆ ಗುಂಡು ತಗುಲದಂತೆ ತಮ್ಮ ಎದೆಯನ್ನು ಮುಂದಿಟ್ಟರು. ತುಕಾರಾಂ ಎದೆಯೊಳಗೆ 23 ಗುಂಡುಗಳು ಹೊಕ್ಕವು, ಆದರೂ ಆ 'ದಿ ಬ್ರೇವ್' ಪೊಲೀಸ್ ಅಧಿಕಾರಿ ಕಸಬ್‌ನನ್ನು ಜೀವಂತ ಹಿಡಿಯುವಲ್ಲಿ ಯಶಸ್ವಿಯಾದರು. ಆದರೆ ವಿಧಿಯಾಟದಲ್ಲಿ ತುಕಾರಾಂ ತಮ್ಮ ಪ್ರಾಣವನ್ನು ದೇಶಕ್ಕಾಗಿ ಸಮರ್ಪಿಸಿದರು. ಭಯೋತ್ಪಾದಕನನ್ನು ಜೀವಂತ ಹಿಡಿದಿದ್ದರಿಂದಲೇ 26/11 ರ ಹತ್ಯಾಕಾಂಡದ ಸಂಪೂರ್ಣ ಸತ್ಯ ಹೊರಬಂದಿತು.

 

ಇಂದಿಗೆ 17 ವರ್ಷ ಕಳೆದರೂ ದೇಶವು ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ದಾಳಿಯಲ್ಲಿ 166 ಅಮಾಯಕ ಜನರು ತಮ್ಮ ಪ್ರಾಣ ಕಳೆದುಕೊಂಡರು ಮತ್ತು ಭದ್ರತಾ ಪಡೆಗಳು 9 ಭಯೋತ್ಪಾದಕರನ್ನು ಕೊಂದವು. ಕಸಬ್‌ನನ್ನು ನವೆಂಬರ್ 21, 2012 ರಂದು ಗಲ್ಲಿಗೇರಿಸಲಾಯಿತು.