ಹರಿಯಾಣ: ಆಧುನಿಕ ಭಾರತದಲ್ಲಿ ಕಾರು ಎನ್ನುವುದು ಈಗ ಕುಟುಂಬದ ಸದಸ್ಯರಂತೆಯೇ ಪರಿಣಮಿಸಿದೆ. ಮಧ್ಯಮ ವರ್ಗದವರು ಮನೆಯಲ್ಲೊಂದು ಕಾರು ಇಟ್ಟುಕೊಳ್ಳುವುದನ್ನು ಕನಸಾಗಿಟ್ಟುಕೊಂಡರೆ, ಶ್ರೀಮಂತರು ಅನೇಕ ಕಾರುಗಳನ್ನು ತಮ್ಮ ಸಂಗ್ರಹದಲ್ಲಿರಿಸಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾರುಗಳ ಮೇಲಿನ ಕ್ರೇಜ್ ಇನ್ನಷ್ಟು ಏರಿಕೆಯಾಗಿದ್ದು, ಉತ್ತಮ ಸೌಲಭ್ಯಗಳು, ಆಕರ್ಷಕ ಬಣ್ಣ, ಒಳಾಂಗಣ ವಿನ್ಯಾಸ ಮುಂತಾದವುಗಳಿಗೆ ಕಾರು ಮಾಲಕರು ಲಕ್ಷಾಂತರ ಹಣ ಹೂಡುತ್ತಿದ್ದಾರೆ.
ಈ ಕ್ರೇಜ್ ಕಾರಿನ ನಂಬರ್‌ಪ್ಲೇಟ್‌ಗಳಿಗೂ ವಿಸ್ತರಿಸಿದ್ದು, ಅನೇಕರು ತಮ್ಮ ವಾಹನಕ್ಕೆ ಫ್ಯಾನ್ಸಿ ನಂಬರ್ ಪಡೆಯಲು ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲು ಹಿಂಜರಿಯುವುದಿಲ್ಲ. ಇದೇ ರೀತಿ, ಹರಿಯಾಣದ ವ್ಯಕ್ತಿಯೊಬ್ಬರು ತಮ್ಮ ಬಯಸಿದ ನಂಬರ್‌ಪ್ಲೇಟ್ HR88B8888 ಪಡೆಯಲು ಬರೊಬ್ಬರಿ ₹1.17 ಕೋಟಿ ಹಣ ವ್ಯಯಿಸಿದ್ದಾರೆ. ಈ ನಂಬರ್‌ಗೆ ಒಟ್ಟು 45 ಮಂದಿ ಅರ್ಜಿ ಸಲ್ಲಿಸಿದ್ದರೆ, ಅತಿ ದೊಡ್ಡ ಮೊತ್ತದ ಬಿಡ್ ಮಾಡಿದ ಆ ವ್ಯಕ್ತಿ ಅಂತಿಮವಾಗಿ ಅದನ್ನು ಜಯಿಸಿದ್ದಾರೆ.
₹50,000ರಿಂದ ಆರಂಭವಾದ ಈ ಬಿಡ್ಡಿಂಗ್ ಪ್ರಕ್ರಿಯೆ ದಾಖಲೆಯ ಮಟ್ಟಕ್ಕೆ ಏರಿ ₹1.17 ಕೋಟಿಯಲ್ಲಿ ಕೊನೆಗೊಂಡಿತು. ದೇಶದಲ್ಲಿ ಯಾವತ್ತೂ ಇಷ್ಟು ದುಬಾರಿ ದರಕ್ಕೆ ಮಾರಾಟವಾದ ನೋಂದಣಿ ಸಂಖ್ಯೆ ಇದಾಗಿದ್ದು, ಇದೀಗ ರಾಷ್ಟ್ರಮಟ್ಟದ ದಾಖಲೆ ಸ್ಥಾಪಿಸಿದೆ. ಫ್ಯಾನ್ಸಿ ನಂಬರ್‌ಗಳ ಕ್ರೇಜ್ ಭಾರತದಲ್ಲಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಇದು ಜೀವಂತ ನಿದರ್ಶನವೇ ಸರಿ!





