ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಪಟ್ಟಕ್ಕೆ ಸಂಬಂಧಿಸಿದಂತೆ ಹಗ್ಗಜಗ್ಗಾಟ ತೀವ್ರಗೊಂಡಿರುವ ಸಂದರ್ಭದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ಹೈಕಮಾಂಡ್‌ನ ನಿರ್ಣಯವೇ ಅಂತಿಮ' ಎಂದು ಹೇಳುತ್ತಲೇ ಬಂದಿದ್ದಾರೆ. ಅದೇ ರೀತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ 'ಹೈಕಮಾಂಡ್‌ನ ಯಾವುದೇ ನಿರ್ಧಾರಕ್ಕೆ ನಾನು ಬದ್ಧ' ಎಂದು ಹೇಳುತ್ತಿದ್ದಾರೆ.
ಆದರೆ, ಈ ಇಬ್ಬರು ಪ್ರಬಲ ನಾಯಕರ ಬೆಂಬಲಿಗರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಸಂಬಂಧಿಸಿದಂತೆ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಲೇ ಇದ್ದಾರೆ.
ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನದಲ್ಲಿರುವ ಡಿಕೆಸಿ, ತಮ್ಮ 'ಎಕ್ಸ್' (X) ಖಾತೆಯಲ್ಲಿ ಬರೆದಿರುವ ವಿಷಯವು ಕುತೂಹಲ ಮೂಡಿಸಿದೆ. "ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿ ದೊಡ್ಡ ಶಕ್ತಿ. ಯಾರೇ ಆಗಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ, ಯಾರೇ ಆಗಿರಲಿ... ನನ್ನನ್ನು ಸೇರಿಸಿ ಎಲ್ಲರೂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕೊಟ್ಟ ಮಾತಿನ ಶಕ್ತಿಯೇ ಜಗತ್ತಿನ ಶಕ್ತಿಯಾಗಿದೆ," ಎಂದು ಅವರು ಬರೆದುಕೊಂಡಿದ್ದಾರೆ.
ಈ ಮಧ್ಯೆ, ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್‌ನ ನಿರ್ಧಾರವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಬಿಜೆಪಿ ಹೇಳುತ್ತಲೇ ಬಂದಿದ್ದು, ಈಗ ನಡೆಯುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.





