ಮಂಗಳೂರು: ನಾಳೆ ಉಡುಪಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.
ನಾಳೆ ಬೆಳಿಗ್ಗೆ 11:05 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಮಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಉಡುಪಿಗೆ ತೆರಳಲಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಮಂಗಳೂರಿಗೆ ವಾಪಸಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಏರ್ಪೋರ್ಟಿಗೆ ವಾಪಸ್ ಆಗಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಭದ್ರತೆ ನೀಡು ನಿಯೋಜನೆ ಮಾಡಲಾಗಿದೆ. ಏರ್ಪೋರ್ಟ್ ನಲ್ಲಿಯೇ SPG ಮತ್ತು ಐಬಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಪ್ರಧಾನಿ ಮೋದಿಯವರ ಭೇಟಿಯ ಪೂರ್ವಸಿದ್ಧತೆಯ ಸಲುವಾಗಿ ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ) ಮಂಗಳವಾರ ಉಡುಪಿಗೆ ಆಗಮಿಸಿ ಸ್ಥಳಗಳ ಪರಿಶೀಲನೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಅಂತಿಮಗೊಳಿಸಲಿದೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಸಹ ಭೇಟಿ ಮಾಡಿದೆ. ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತಿದೆ.
ಹೆಲಿಪ್ಯಾಡ್‌ನಿಂದ ಮಠಕ್ಕೆ ಹೋಗುವ ಮಾರ್ಗದಲ್ಲಿ ದುರಸ್ತಿ ಕಾರ್ಯಗಳು ಮತ್ತು ಬ್ಯಾರಿಕೇಡಿಂಗ್ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ, ಉಡುಪಿ ಜಿಲ್ಲಾಡಳಿತ ನವೆಂಬರ್ 28 ರಂದು ಸಂಚಾರ ನಿರ್ಬಂಧ ಮತ್ತು ಮಾರ್ಗ ಬದಲಾವಣೆಗಳನ್ನು ವಿಧಿಸಿದೆ. ಪ್ರಧಾನ ಮಂತ್ರಿಯವರ ಭೇಟಿಯ ಸಮಯದಲ್ಲಿ ಸುಗಮ ಸಂಚಾರ ಮತ್ತು ಭದ್ರತೆಯನ್ನು ಸುಗಮಗೊಳಿಸಲು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವಾಹನ ಸಂಚಾರವನ್ನು ನಿಯಂತ್ರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ವರೂಪ ಟಿ.ಕೆ. ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.





