10 December 2025 | Join group

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ: ಭಕ್ತರ ಹರ್ಷೋದ್ಘಾರದ ಮಧ್ಯೆ ವೈಭವದ ಸಮಾರಂಭ

  • 27 Nov 2025 06:12:21 PM

ಸುಬ್ರಮಣ್ಯ: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಪ್ರಸಿದ್ಧ ತೀರ್ಥಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿಷ್ಠಿತ ಚಂಪಾಶಕ್ತಿ ಬ್ರಹ್ಮರಥೋತ್ಸವ ಭಕ್ತಿಭಾವಪೂರ್ಣವಾಗಿ ಮತ್ತು ಅದ್ದೂರಿಯಾಗಿ ನೆರವೇರಿತು.

 

ಬೆಳಿಗ್ಗೆ 7.21ರ ವೃಶ್ಚಿಕ ಲಗ್ನ ಸಂಹೂರ್ತದಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರ ದಿವ್ಯ ರಥವನ್ನು ಭಕ್ತರು ಗಟ್ಟಿಯಾದ ಜಯಘೋಷಗಳ ಮಧ್ಯೆ ಎಳೆದಿದ್ದಾರೆ. ರಥೋತ್ಸವವು ವೈದಿಕ ಮಂತ್ರೋಚ್ಚಾರಗಳು, ನಾದಸ್ವರ, ಗಂಟಾನಾದಗಳೊಂದಿಗೆ ಅದ್ಧೂರಿಯಾಗಿ ಸಾಗಿದೆ.

 

ಸ್ವಾಮಿಯವರ ಬ್ರಹ್ಮರಥ ಸುಸಂಪನ್ನಗೊಂಡ ನಂತರ, ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದರು. ಸುಮಾರು 300ಕ್ಕೂ ಹೆಚ್ಚು ಭಕ್ತರು ಕುಕ್ಕೆ ಅಂಗಣದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ವಿಶೇಷ ಸೇವೆ ಸಲ್ಲಿಸಿದರು. ಅನೇಕರು ತಮ್ಮ ಕುಟುಂಬ ಸಮೇತರಾಗಿ ಹಾಜರಿದ್ದು, ಧಾರ್ಮಿಕ ವಾತಾವರಣಕ್ಕೆ ಇನ್ನಷ್ಟು ಭಕ್ತಿ ಭಾವವನ್ನುಂಟುಮಾಡಿದರು.

 

ಅತ್ತ ಘಾಟಿ ಸುಬ್ರಹ್ಮಣ್ಯದಲ್ಲೂ ವಿಶೇಷ ಪೂಜೆ ಹಾಗೂ ಅಲಂಕಾರಗಳೊಂದಿಗೆ ದೇವರಿಗೆ ವೈಭವದ ಸೇವೆಗಳನ್ನು ನೆರವೇರಿಸಲಾಯಿತು. ದೇವಾಲಯ ಸಂಪೂರ್ಣವಾಗಿ ಹೂವಿನ ಸಿಂಗಾರದಿಂದ ಮೆರೆಯುತ್ತಿದ್ದು, ಭಕ್ತರ ದಂಡುಗಳು ದಿನಪೂರ್ತಿ ಹರಿದುಬಂದುವು.

 

ಪ್ರತಿವರ್ಷ ಸಾವಿರಾರು ಜನರನ್ನು ಆಕರ್ಷಿಸುವ ಕುಕ್ಕೆ ಸುಬ್ರಹ್ಮಣ್ಯದ ರಥೋತ್ಸವ ಈ ವರ್ಷವೂ ಅದೇ ವೈಭವದಲ್ಲಿ ನೆರವೇರಿದ್ದು, ಭಕ್ತರ ಭಾವನೆ ಹಾಗೂ ಭಕ್ತಿಯ ತೀವ್ರತೆ ಅದರ ಸೊಬಗನ್ನು ಇನ್ನಷ್ಟು ಹೆಚ್ಚಿಸಿತು.