10 December 2025 | Join group

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡಕ್ಕೆ ‘ರಫ್ತು ಕೇಂದ್ರ’ ಮಾನ್ಯತೆ: ಸಮುದ್ರಾಹಾರ ಮತ್ತು ಗೋಡಂಬಿ ಪ್ರಮುಖ ರಫ್ತು ಉತ್ಪನ್ನಗಳು ಎಂದ ಸರ್ಕಾರ

  • 03 Dec 2025 04:42:26 PM

ಮಂಗಳೂರು: ದಕ್ಷಿಣ ಕನ್ನಡಕ್ಕೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾನ್ಯತೆ ಲಭಿಸಿದೆ. ಜಿಲ್ಲೆಯನ್ನು ಅಧಿಕೃತವಾಗಿ ‘ರಫ್ತು ಕೇಂದ್ರ’ ಎಂದು ಘೋಷಿಸಿರುವ ಸರ್ಕಾರ, ಸಮುದ್ರಾಹಾರ ಮತ್ತು ಗೋಡಂಬಿ ಉತ್ಪನ್ನಗಳನ್ನು ಈ ಪ್ರದೇಶದ ಪ್ರಮುಖ ರಫ್ತು ಸಾಮರ್ಥ್ಯ ಹೊಂದಿರುವ ವಸ್ತುಗಳೆಂದು ಗುರುತಿಸಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

 

‘ಜಿಲ್ಲಾ ರಫ್ತು ಕೇಂದ್ರ (DEH)’ ಯೋಜನೆಯಡಿ ದಕ್ಷಿಣ ಕನ್ನಡಕ್ಕೆ ದೊರೆತಿರುವ ಈ ಮಾನ್ಯತೆ, ಜಿಲ್ಲೆಯ ಆರ್ಥಿಕ ವಲಯದಲ್ಲಿ ನಡೆಯುತ್ತಿರುವ ಸುಸ್ಥಿರ ಬೆಳವಣಿಗೆ ಪ್ರಯತ್ನಗಳಿಗೆ ಮತ್ತಷ್ಟು ಬಲ ತುಂಬಿದೆ. ಡಿಸೆಂಬರ್ 2ರಂದು ಸಂಸತ್ತಿನಲ್ಲಿ ಬ್ರಿಜೇಶ್ ಚೌಟ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಈ ಮಾಹಿತಿ ನೀಡಿದೆ.

 

ದಕ್ಷಿಣ ಕನ್ನಡವನ್ನು ರಫ್ತು ಕೇಂದ್ರವಾಗಿ ಘೋಷಿಸುವುದು ಸ್ಥಳೀಯ ಕೈಗಾರಿಕೆಗಳನ್ನು ವಿಸ್ತರಿಸಲು, ಮೌಲ್ಯವರ್ಧಿತ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಜಾಗತಿಕ ಮಾರುಕಟ್ಟೆಗಳಿಗೆ ಜಿಲ್ಲೆಯ ಪ್ರವೇಶವನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ ಎಂದು ಕೇಂದ್ರ ಸಚಿವ ಜಿತಿನ್ ಪ್ರಸಾದ ತಮ್ಮ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

 

ಈ ಯೋಜನೆ ಪರಿಣಾಮಕಾರಿಯಾಗಲು ಜಿಲ್ಲಾ ಮಟ್ಟದ ರಫ್ತು ಕ್ರಿಯಾ ಯೋಜನೆಗಳ ಅನುಷ್ಠಾನ, ರಾಜ್ಯ ಹಾಗೂ ಜಿಲ್ಲಾ ರಫ್ತು ಉತ್ತೇಜನ ಸಮಿತಿಗಳ ಸಕ್ರಿಯ ಸಮನ್ವಯ, ಕಸ್ಟಮ್ಸ್ ಹಾಗೂ ಲಾಜಿಸ್ಟಿಕ್ಸ್ ಮೂಲಸೌಕರ್ಯದ ಸುಧಾರಣೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬೆಂಬಲ, ಪರೀಕ್ಷಾ ಕೇಂದ್ರಗಳ ಅಭಿವೃದ್ಧಿ, ಗೋದಾಮು ಸೌಲಭ್ಯಗಳ ಬಲಪಡಿಕೆ ಮತ್ತು ಇ–ಕಾಮರ್ಸ್ ಆಧಾರಿತ ರಫ್ತುಗಳ ಪ್ರಚಾರ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.

 

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ರಫ್ತು ಕ್ರಿಯಾ ಯೋಜನೆ ಈಗಾಗಲೇ ಜಾರಿಯಲ್ಲಿ ಇದ್ದು, ನವಮಂಗಳೂರು ಬಂದರಿನೊಂದಿಗೆ ಜಿಲ್ಲೆಯ ಸಂಪರ್ಕ ಬಲವಾಗಿದೆ. ಜೊತೆಗೆ ಜಿಲ್ಲಾ ರಫ್ತು ಉತ್ತೇಜನ ಸಮಿತಿಯನ್ನೂ ರಚಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.