ಮಂಗಳೂರು: ನಗರ ಪೊಲೀಸ್ ಆಯುಕ್ತಾಲಯ ನಡೆಸಿದ್ದ ಶಾಲಾ–ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾಗೃತಿ ಮತ್ತು ಯಾದೃಚ್ಛಿಕ ಮಾದಕವಸ್ತು ಪರೀಕ್ಷಾ ಅಭಿಯಾನದ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಒಟ್ಟು 77 ಶಿಕ್ಷಣ ಸಂಸ್ಥೆಗಳಲ್ಲಿ ತಪಾಸಣೆ ನಡೆಸಿದ್ದು, 20 ವಿದ್ಯಾರ್ಥಿಗಳು ಮಾದಕವಸ್ತು ಸೇವನೆಯಲ್ಲಿ ಪಾಸಿಟಿವ್ ಬಂದಿದ್ದಾರೆ.
ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಸುಧೀರ್ ಕುಮಾರ್ ರೆಡ್ಡಿ ಅವರು ಕಾಲೇಜು ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿರುವ ಮಾದಕವಸ್ತು ಬಳಕೆಯನ್ನು ಗಂಭೀರವಾಗಿ ಪರಿಗಣಿಸಿ, ಇದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದರು. ಕೆಲವು ಕಾಲೇಜುಗಳ ಆಡಳಿತ ಮಂಡಳಿಯಿಂದ ಆರಂಭಿಕ ಆಕ್ಷೇಪಣೆಗಳು ವ್ಯಕ್ತವಾದರೂ, ಆಯುಕ್ತರು ಯಾವುದೇ ರಾಜಿಗೂ ಹೋಗದೆ ಯಾದೃಚ್ಛಿಕ ತಪಾಸಣೆ ಮುಂದುವರಿಸುವಂತೆ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದರು.
ಜೂನ್ 1 ರಿಂದ ನವೆಂಬರ್ 30ರವರೆಗೆ ನಡೆದ ಕ್ಯಾಂಪಸ್ ತಪಾಸಣೆಯ ವಿವರಗಳು: ಮಂಗಳೂರು ದಕ್ಷಿಣ ಉಪವಿಭಾಗ (ಉಳ್ಳಾಲ, ಕೊಣಾಜೆ, ಗ್ರಾಮಾಂತರ): 29 ಕಾಲೇಜುಗಳಲ್ಲಿ 1,601 ವಿದ್ಯಾರ್ಥಿಗಳನ್ನು ಪರೀಕ್ಷಿಸಿದಾಗ 8 ಪಾಸಿಟಿವ್, 1,593 ನೆಗೆಟಿವ್. ಮಂಗಳೂರು ಕೇಂದ್ರ ಉಪವಿಭಾಗ (ಬಂದರ್, ಉರ್ವಾ, ಕದ್ರಿ, ಪಾಂಡೇಶ್ವರ): 30 ಕಾಲೇಜುಗಳ 1,448 ವಿದ್ಯಾರ್ಥಿಗಳಲ್ಲಿ 6 ಪಾಸಿಟಿವ್, 1,442 ನೆಗೆಟಿವ್. ಮಂಗಳೂರು ಉತ್ತರ ಉಪವಿಭಾಗ (ಪಣಂಬೂರು, ಕಾವೂರು, ಬಜ್ಪೆ, ಸುರತ್ಕಲ್, ಮೂಲ್ಕಿ, ಮೂಡಬಿದ್ರಿ): 11 ಕಾಲೇಜುಗಳ 2,020 ವಿದ್ಯಾರ್ಥಿಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಒಟ್ಟೂ 70 ಕಾಲೇಜುಗಳಲ್ಲಿ 5,069 ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಲ್ಲಿ ಪರೀಕ್ಷಿಸಲಾಗಿದ್ದು, ಇಲ್ಲಿ 14 ಮಂದಿ ಪಾಸಿಟಿವ್ ಬಂದಿದ್ದಾರೆ.
ಕ್ಯಾಂಪಸ್ ಹೊರಗಿನ ತಪಾಸಣೆ
ಕೆಲವು ಕಾಲೇಜುಗಳು ಪ್ರಾರಂಭದಲ್ಲಿ ಪರೀಕ್ಷೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಪೊಲೀಸರು ಕ್ಯಾಂಪಸ್‌ಗಳ ಹೊರಭಾಗದಲ್ಲಿ ತಪಾಸಣೆಯನ್ನು ನಡೆಸಿದರು. ಈ ವೇಳೆ ಪತ್ತೆಯಾದ ಪಾಸಿಟಿವ್ ಪ್ರಕರಣಗಳ ವರದಿ ಸಂಬಂಧಿತ ಆಡಳಿತಗಳಿಗೆ ಹಂಚಿಕೊಂಡ ನಂತರ, ಹೆಚ್ಚಿನ ಕಾಲೇಜುಗಳು ಕ್ಯಾಂಪಸ್ ಪರೀಕ್ಷೆಗೆ ಮುಂದೆ ಬಂದವು. ದಕ್ಷಿಣ ಉಪವಿಭಾಗ: 3 ಕಾಲೇಜುಗಳ 30 ವಿದ್ಯಾರ್ಥಿಗಳು — ಎಲ್ಲರೂ ನೆಗೆಟಿವ್, ಕೇಂದ್ರ ಉಪವಿಭಾಗ: 18 ಕಾಲೇಜುಗಳ 88 ವಿದ್ಯಾರ್ಥಿಗಳು — 4 ಪಾಸಿಟಿವ್, ಉತ್ತರ ಉಪವಿಭಾಗ: 7 ಕಾಲೇಜುಗಳ 139 ವಿದ್ಯಾರ್ಥಿಗಳು — 2 ಪಾಸಿಟಿವ್, ಕ್ಯಾಂಪಸ್ ಮತ್ತು ಹೊರತಪಾಸಣೆ ಸೇರಿ, ಒಟ್ಟು 20 ವಿದ್ಯಾರ್ಥಿಗಳು ಪಾಸಿಟಿವ್ ಆಗಿದ್ದಾರೆ.
ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಸೂಚನೆ
ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಯ ಸಮಯದಲ್ಲಿಯೇ ಮಾದಕವಸ್ತು ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಆಯುಕ್ತರು ಸಲಹೆ ನೀಡಿದರು. ಇದು ಕ್ಯಾಂಪಸ್‌ಗಳನ್ನು ಮಾದಕವಸ್ತುಮುಕ್ತವಾಗಿಡಲು ಪರಿಣಾಮಕಾರಿ ಆಗುತ್ತದೆ ಎಂದು ಅವರು ಹೇಳಿದರು. ಹಲವು ಸಂಸ್ಥೆಗಳು ಈಗಾಗಲೇ ಈ ಕ್ರಮ ಅನುಸರಿಸುತ್ತಿರುವುದನ್ನೂ ಅವರು ಗಮನಿಸಿದರು.
ಆಯುಕ್ತರು ಮುಂದುವರೆದು,“ಮಾದಕವಸ್ತು ಪರೀಕ್ಷಾ ಅಭಿಯಾನದ ಎರಡನೇ ಹಂತವನ್ನು ಜನವರಿಯಲ್ಲಿ ಪ್ರಾರಂಭಿಸಲಾಗುತ್ತದೆ. ಈ ಹಂತದಲ್ಲಿ ಹೊಸ ವಿದ್ಯಾರ್ಥಿಗಳ ಜೊತೆಗೆ ಮೊದಲ ಹಂತದಲ್ಲಿ ಪಾಸಿಟಿವ್ ಬಂದವರಿಗೂ ಮರು ಪರೀಕ್ಷೆ ನಡೆಯಲಿದೆ,” ಎಂದು ತಿಳಿಸಿದರು.





