ರಷ್ಯಾ: ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಬಹುದಾದ ಘೋಷಣೆಯನ್ನು ರಷ್ಯಾ ಮಾಡಿದೆ. ಪ್ರಪಂಚದಾದ್ಯಂತ ಕ್ಯಾನ್ಸರ್ ರೋಗಿಗಳಿಗೆ ಹೊಸ ರೀತಿಯ ಕ್ಯಾನ್ಸರ್ ಲಸಿಕೆಯನ್ನು ಶೀಘ್ರದಲ್ಲೇ ಉಚಿತವಾಗಿ ನೀಡುವ ಯೋಜನೆ ಇದೆ ಎಂದು ರಷ್ಯಾದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಲಸಿಕೆ ಕ್ಯಾನ್ಸರ್ ಗೆಡ್ಡೆಗಳಲ್ಲಿ ಕಾಣಿಸಿಕೊಳ್ಳುವ ನಿರ್ದಿಷ್ಟ ಆಣ್ವಿಕ ಗುರುತುಗಳನ್ನು ಗುರುತಿಸಿ ಗುರಿಯಾಗಿಸುವ ತಂತ್ರಜ್ಞಾನವನ್ನು ಆಧರಿಸಿದೆ. ರೋಗ ಹರಡುವ ಮೊದಲುಲೇ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಿ ನಾಶಮಾಡಲು ಪ್ರತಿರಕ್ಷಣಾ ವ್ಯವಸ್ಥೆಗೆ ತರಬೇತಿ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಪ್ರಾರಂಭಿಕ ಪ್ರಯೋಗಗಳಲ್ಲಿ ಲಸಿಕೆ ಆಶಾದಾಯಕ ಫಲಿತಾಂಶಗಳನ್ನು ತೋರಿಸಿದ್ದು, ರೋಗಿಗಳಲ್ಲಿ ಗೆಡ್ಡೆಯ ಬೆಳವಣಿಗೆ ನಿಧಾನಗೊಳ್ಳುವುದು, ಮರುಕಳಿಸುವಿಕೆ ಕಡಿಮೆಯಾಗುವುದು ಹಾಗೂ ಹಲವು ವಿಧದ ಕ್ಯಾನ್ಸರ್‌ಗಳ ವಿರುದ್ಧ ದೀರ್ಘಕಾಲೀನ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿರುವುದು ಕಂಡುಬಂದಿದೆ.
ವಿಜ್ಞಾನಿಗಳ ಪ್ರಕಾರ, ಈ ಲಸಿಕೆ ವಿಶೇಷ ರೋಗನಿರೋಧಕ ಕೋಶಗಳನ್ನು ಸಕ್ರಿಯಗೊಳಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಒಮ್ಮೆ ಲಸಿಕೆ ನೀಡಿದ ಬಳಿಕ, ಅದು ಕ್ಯಾನ್ಸರ್ ಕೋಶಗಳನ್ನು ದೇಹಕ್ಕೆ “ಶತ್ರು” ಎಂದು ಗುರುತಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ದೇಹವೇ ಗುರಿಯಿಟ್ಟುಕೊಂಡು ಆಕ್ರಮಣಕಾರಿ ದಾಳಿಯನ್ನು ನಡೆಸುತ್ತದೆ ಎನ್ನುತ್ತಾರೆ ರಷ್ಯಾದ ಸಂಶೋಧಕ ವೈದ್ಯರು. ಸಾಂಪ್ರದಾಯಿಕ ಲಸಿಕೆಗಳು ವೈರಸ್‌ಗಳ ವಿರುದ್ಧ ಕೆಲಸ ಮಾಡುವ ರೀತಿಯಲ್ಲೇ ಇದು ಮಾಡಲಿದೆ.
ಕಿಮೊಥೆರಪಿ ಅಥವಾ ವಿಕಿರಣ ಚಿಕಿತ್ಸೆಗಳಿಗಿಂತ ಭಿನ್ನವಾಗಿ, ಈ ವಿಧಾನವು ದೇಹದ ಸ್ವಾಭಾವಿಕ ರಕ್ಷಣಾ ವ್ಯವಸ್ಥೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಅಡ್ಡಪರಿಣಾಮಗಳು ಕಡಿಮೆ ಆಗುವ ಸಾಧ್ಯತೆ ಇದ್ದು, ದೀರ್ಘಕಾಲೀನ ಫಲಿತಾಂಶಗಳು ಉತ್ತಮವಾಗುವ ನಿರೀಕ್ಷೆಯಿದೆ.
ಈ ಘೋಷಣೆಯು ವಿಶ್ವದಾದ್ಯಂತ ಭಾರೀ ನಿರೀಕ್ಷೆ ಮತ್ತು ಆಶಾವಾದಕ್ಕೆ ಕಾರಣವಾಗಿದೆ, ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆ ದುಬಾರಿಯಾಗಿರುವ ಮತ್ತು ಎಲ್ಲರಿಗೂ ಲಭ್ಯವಿಲ್ಲದ ದೇಶಗಳಲ್ಲಿ. ಆದಾಯ ಅಥವಾ ಭೌಗೋಳಿಕ ಅಡ್ಡಿಯಿಲ್ಲದೆ ಎಲ್ಲರಿಗೂ ಲಸಿಕೆ ಲಭ್ಯವಾಗಬೇಕು ಎಂಬುದು ಈ ಯೋಜನೆಯ ಗುರಿಯಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ಯಶಸ್ವಿಯಾಗಿ ಜಾರಿಗೆ ಬಂದರೆ, ಇದು ಆಂಕೊಲಾಜಿ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬಹುದು. ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ರೋಗನಿರೋಧಕ-ಆಧಾರಿತ ಆರಂಭಿಕ ಚಿಕಿತ್ಸೆ ಜಾಗತಿಕ ಮಟ್ಟದಲ್ಲಿ ಸಾಮಾನ್ಯವಾಗುವ ದಿನಗಳು ದೂರವಿಲ್ಲ ಎಂಬ ನಂಬಿಕೆಯನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.





