ಮಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ತಲವಾರು ಹಿಡಿದು ನೃತ್ಯ ಮಾಡುವ ವೀಡಿಯೊವನ್ನು ಹಂಚಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಆರೋಪದ ಮೇಲೆ ಕಾವೂರು ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಡಿಸೆಂಬರ್ 13ರಂದು, ಸುರೇಶ್ (29) ಎಂಬವರು ನಿರ್ವಹಿಸುತ್ತಿದ್ದ “ಸುರೇಶ್ ಸೈ (Suresh Psy)” ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ, ಅಮೀರ್ ಸುಹೈಲ್ (28) ಕತ್ತಿ ಹಿಡಿದು ಹಾಡಿನ ತಾಳಕ್ಕೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಸ್ಟೋರಿಯಾಗಿ ಅಪ್‌ಲೋಡ್ ಮಾಡಲಾಗಿತ್ತು. ಈ ವೀಡಿಯೊಕ್ಕೆ ಬಿಳಿ ಹೃದಯದ ಎಮೋಜಿಯೊಂದಿಗೆ “VIBES” ಎಂಬ ಶೀರ್ಷಿಕೆ ನೀಡಲಾಗಿತ್ತು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ಮಾಹಿತಿ ನೀಡಿದ್ದಾರೆ.
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ಜನರಲ್ಲಿ ಆತಂಕ ಹಾಗೂ ಅಸುರಕ್ಷಿತ ಭಾವನೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್ 352(2), ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 4 ಹಾಗೂ 25(1)(ಎ), ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳಾದ ಸುರೇಶ್ ಮತ್ತು ಅಮೀರ್ ಸುಹೈಲ್ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ವೀಡಿಯೊದಲ್ಲಿ ಬಳಸಿದ್ದ ತಲ್ವಾರ್ ಹಾಗೂ ಚಿತ್ರೀಕರಣ ಮತ್ತು ಅಪ್‌ಲೋಡ್‌ಗೆ ಬಳಸಿದ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರ ಪೈಕಿ ಅಮೀರ್ ಸುಹೈಲ್ ಮಂಗಳೂರಿನ ಬಂದರ್ ಪ್ರದೇಶದ ನಿವಾಸಿಯಾಗಿದ್ದು, ಸುರೇಶ್ ಕಾವೂರಿನ ಉರುಂಡಡಿಗುಡ್ಡೆ ಮೂಲದವರಾಗಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ ಅವರ ಮೇಲ್ವಿಚಾರಣೆಯಲ್ಲಿ, ಕಾವೂರು ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಎಂ ಬೈಂದೂರು ನೇತೃತ್ವದ ತಂಡವು, ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ್ ಸೇರಿದಂತೆ ಸಿಬ್ಬಂದಿಯ ಸಹಕಾರದಿಂದ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.





