ದುಬೈ: ನಾಳೆ (ಜನವರಿ 3) ನಡೆಯಲಿರುವ ಮಿಯ್ಯಾರು ಕಂಬಳದಲ್ಲಿ ಕಂಬಳ ಪ್ರೇಮಿಗಳ ಎದುರು ಕ್ಷಮೆ ಕೇಳಬೇಕು ಎಂದು ‘ನಮ್ಮ ಕಂಬಳ ಟೀಂ ದುಬೈ’ ಆಗ್ರಹಿಸಿದೆ. ಮಂಗಳೂರಿನ ಕಂಬಳದಲ್ಲಿ ಖ್ಯಾತ ಉದ್ಘೋಷಕರಾಗಿರುವ ಹಾಗೂ “ಕಂಬಳ ಕ್ಷೇತ್ರದ ಭೀಷ್ಮ” ಎಂಬ ಖ್ಯಾತಿಗೆ ಪಾತ್ರರಾದ ಗುಣಪಾಲ ಕಡಂಬರವರಿಗೆ ಆದ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಯುಎಇಯಲ್ಲಿರುವ ಕಂಬಳ ಅಭಿಮಾನಿಗಳು ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ತುಳುನಾಡಿನ ಕಂಬಳ ಕ್ಷೇತ್ರಕ್ಕೆ ಈ ಘಟನೆ ದೊಡ್ಡ ಅಗೌರವವಾಗಿದ್ದು, ಕಂಬಳದ ಇತಿಹಾಸ, ಪರಂಪರೆ ಮತ್ತು ಗೌರವವನ್ನು ಧಕ್ಕೆಗೊಳಿಸುವಂತಹ ನಡೆ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮರಳು ಭೂಮಿಯಲ್ಲಿ ದುಡಿಯುತ್ತಾ, ಕಂಬಳವನ್ನು ಅತ್ಯಂತ ಪ್ರೀತಿ ಹಾಗೂ ಭಕ್ತಿಯಿಂದ ಅನುಸರಿಸುತ್ತಿರುವ ನಾವು, ಕಂಬಳ ಆರಂಭದಿಂದ ಅಂತ್ಯದವರೆಗೆ ಮೊಬೈಲ್ ಫೋನ್ ಹಾಗೂ ಇತರೆ ಪರದೆಗಳ ಮೂಲಕ ಕಂಬಳವನ್ನು ವೀಕ್ಷಿಸುತ್ತೇವೆ. ಕಂಬಳದ ಸವಿಯನ್ನು ಇನ್ನಷ್ಟು ಹೆಚ್ಚಿಸುವವರು ಕಂಬಳ ಉದ್ಘೋಷಕರೇ ಆಗಿದ್ದು, ಅಂತಹ ಗೌರವಾನ್ವಿತ ಉದ್ಘೋಷಕರಿಗೆ ಆದ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ‘ನಮ್ಮ ಕಂಬಳ ಟೀಂ ದುಬೈ’ ಹೇಳಿಕೆಯಲ್ಲಿ ತಿಳಿಸಿದೆ.
ಗುಣಪಾಲ ಕಡಂಬರ ಧ್ವನಿಯೇ ಕಂಬಳಕ್ಕೆ ವಿಶೇಷ ಆಕರ್ಷಣೆಯಾಗಿದ್ದು, ಅವರ ಧ್ವನಿಯಲ್ಲಿ ಕಂಬಳದ ಇತಿಹಾಸವನ್ನು ಕೇಳಲು ಲಕ್ಷಾಂತರ ಕಂಬಳ ಅಭಿಮಾನಿಗಳು ನಿರೀಕ್ಷೆಯಲ್ಲಿರುತ್ತಾರೆ. ಇಂತಹ ಖ್ಯಾತಿ ಪಡೆದ ಉದ್ಘೋಷಕರಿಗೆ ಅವಮಾನ ಮಾಡಿರುವುದು ಕೇವಲ ವ್ಯಕ್ತಿಗಷ್ಟೇ ಅಲ್ಲ, ಸಂಪೂರ್ಣ ಕಂಬಳ ಕ್ಷೇತ್ರಕ್ಕೆ ಮಾಡಿದ ಅವಮಾನವಾಗಿದೆ ಎಂದು ತಂಡ ಅಭಿಪ್ರಾಯಪಟ್ಟಿದೆ.
ಕಳೆದ ಕಂಬಳದಲ್ಲಿ ಅವಮಾನ ಮಾಡಿದವರು ನಾಳೆಯ ಮಿಯ್ಯಾರು ಕಂಬಳದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಮುಂದಿನ ದಿನಗಳಲ್ಲಿ ಕಂಬಳ ಕ್ಷೇತ್ರಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕಂಬಳ ಜಿಲ್ಲಾ ಸಮಿತಿ ಹಾಗೂ ಕಂಬಳ ರಾಜ್ಯ ಅಸೋಸಿಯೇಷನ್ ತುರ್ತು ಕ್ರಮ ಕೈಗೊಳ್ಳಬೇಕು ಎಂದು ‘ನಮ್ಮ ಕಂಬಳ ಟೀಂ ದುಬೈ’ಯ ಎಲ್ಲಾ ಸದಸ್ಯರು ಒತ್ತಾಯಿಸಿದ್ದಾರೆ.





