ಮಂಗಳೂರು: ಪುತ್ತೂರಿನಲ್ಲಿ ಆರು ತಿಂಗಳ ಹಿಂದೆ ನಡೆದ ಅಪ್ರಾಪ್ತ ಹುಡುಗಿಯನ್ನು ಗರ್ಭಿಣಿಯಾಗಿಸಿದ ಪ್ರಕರಣ ಜಿಲ್ಲೆಯಾದ್ಯಂತ ಬಹಳ ಸುದ್ದಿ ಮಾಡಿತ್ತು. ಇಲ್ಲಿಯವರಿಗೆ ಯಾವುದೇ ಸರಿಯಾದ ನಿರ್ಧಾರಗಳು ನಡೆಯದೆ ಇದ್ದ ಕಾರಣ ಇಂದು ಮಂಗಳೂರಿನಿನಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ, ಸಂತ್ರಸ್ತ ಹುಡುಗಿ ಮತ್ತು ಆಕೆಯ ಪೋಷಕರು ಪ್ರೆಸ್ ಮೀಟ್ ಮಾಡಿ ಮಾತನಾಡಿದರು.
ಜಗನ್ನಿವಾಸ್ ರಾವ್ ಮತ್ತು ಅವರ ಕುಟುಂಬ ಮಹಿಳೆಯ ಜೀವನವನ್ನು ಹಾಳುಮಾಡಿದ್ದು, ಇದೀಗ ಪ್ರಕರಣವನ್ನು ಹಣದ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ಜಗ್ಗನಿವಾಸ್ ರಾವ್ ಮತ್ತು ಅವರ ಪತ್ನಿಗೆ 50 ಲಕ್ಷ ರೂ. ನೀಡುತ್ತೇವೆ, ಆದರೆ ಅವರ ಮಗನನ್ನು ನಮಿತಾ(ಹುಡುಗಿಯ ತಾಯಿ) ಮನೆಗೆ ಮನೆ ಅಳಿಯನಾಗಿ ಕಳಿಸಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ. ಇದು ಸ್ಪಷ್ಟವಾಗಿ ಮಹಿಳೆಯ ಮೇಲೆ ದೌರ್ಜನ್ಯ ಮತ್ತು ಶೋಷಣೆಯಾಗಿದೆ” ಎಂದು ಹೇಳಿದರು.
ಮಹಿಳೆಗೆ ಸಮಾಜದಲ್ಲಿ ಬದುಕುವ ಹಕ್ಕಿದೆ
“ಇನ್ನು ಮುಂದೆ ಯಾವುದೇ ಮಾಸ್ಕ್ ಅಥವಾ ಬುರ್ಖಾ ಹಾಕುವ ಪ್ರಶ್ನೆಯೇ ಇಲ್ಲ. ಒಂದು ಹೆಣ್ಣಿಗೆ ಈ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿದೆ. ಕಾನೂನು ರೀತಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ಪ್ರತಿಭಾ ಕುಳಾಯಿ ಸ್ಪಷ್ಟಪಡಿಸಿದರು.
ಜೈಲಿಗೆ ಹೋಗಲು ಸಿದ್ಧ
“ಸಾಮಾಜಿಕ ನ್ಯಾಯಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ಜೈಲಿಗೆ ಹೋಗಬೇಕಾದರೂ ನಾವು ಸಿದ್ಧ. ನಮಿತಾ ಮತ್ತು ಪೂಜಾ ಕೂಡ ಸಿದ್ಧರಾಗಿದ್ದಾರೆ. ಅವರ ಜೀವನ ಹಾಳಾಗಲು ನಾವು ಬಿಡುವುದಿಲ್ಲ. ಅವರ ಜೊತೆ ನಾವು ನಿಂತಿದ್ದೇವೆ” ಎಂದು ಹೇಳಿದರು.
ಮಗುವಿಗೆ ಗುರುತು ಬೇಕು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ನಡೆದಿದ್ದು ಕೃಷ್ಣ ಜೆ ರಾವ್ ತಂದೆಯೆಂದು ಸಾಬೀತಾಗಿದೆ. “ಮಗುವಿಗೆ ಒಂದು ಹೆಸರು ಬೇಕು, ಒಂದು ಗುರುತು ಬೇಕು. ಆ ಗುರುತನ್ನು ಕೋರ್ಟ್ ನೀಡುತ್ತದೆ. ಜನವರಿ 24ರಂದು ಮಗುವಿನ ನಾಮಕರಣ ಶಾಸ್ತ್ರವನ್ನು ಕಲ್ಲಡ್ಕದಲ್ಲಿ ಪ್ರತಿಭಟನೆ ಮೂಲಕ ನಡೆಸಲಾಗುವುದು” ಎಂದು ತಿಳಿಸಿದರು. “ಮೊದಲು ಆ ವ್ಯಕ್ತಿ ಆಕೆಯನ್ನು ಮದುವೆಯಾಗಬೇಕು. ನಂತರ ದಾಂಪತ್ಯ ಜೀವನ ಸಾಧ್ಯವಿಲ್ಲ ಎಂದರೆ ಅದಕ್ಕೆ ಕಾನೂನಿನಲ್ಲಿ ವ್ಯವಸ್ಥೆಗಳಿವೆ. ಅದನ್ನು ನಂತರ ನೋಡಬಹುದು” ಎಂದರು.
ಹಣದಿಂದ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ
“ಒಂದು ಸಾವಿರ, ಎರಡು ಸಾವಿರ ಕೊಟ್ಟು ಮೋಜು ಮಾಡುತ್ತಿದ್ದವರಿಗೆ ಈಗ ಕುತ್ತಿಗೆಯವರೆಗೆ ಸಮಸ್ಯೆ ಬಂದಿದೆ. ಅದಕ್ಕಾಗಿ 50 ಲಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಹಣ ನಮಗೆ ಬೇಡ. ನಾವು ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ. ಯಾರ ಬಾಯಿಯನ್ನೂ ಹಣದಿಂದ ಮುಚ್ಚಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.
“ಇನ್ನು ಮುಂದೆ ಎಲ್ಲಾ ಕಡೆ ಪ್ರತಿಭಟನೆ ಆರಂಭವಾಗಲಿದೆ. ಯಾವುದೇ ರೀತಿಯ ಸಂಧಾನಗಳಿಗೆ ಅವಕಾಶವಿಲ್ಲ. ಜಗ್ಗನಿವಾಸ್ ರಾವ್ ಅಥವಾ ಅವರ ಕುಟುಂಬ ಯಾವುದೇ ಸಂಘ ಸಂಸ್ಥೆಯಲ್ಲಿ ಕಾಣಿಸಿಕೊಂಡರೆ ಅಲ್ಲಿಯೇ ಪ್ರತಿಭಟನೆ ನಡೆಸಲಾಗುವುದು. ಇದು ಕೇವಲ ಆರಂಭ ಮಾತ್ರ” ಎಂದು ಎಚ್ಚರಿಸಿದರು.
ತಾಳಿ ಕಟ್ಟುವವರೆಗೂ ಹೋರಾಟ
“ಎಲ್ಲಿಯವರೆಗೆ ಆಕೆಯ ಕುತ್ತಿಗೆಗೆ ತಾಳಿ ಕಟ್ಟುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾಮಕರಣದ ನಂತರ ಮುಂದಿನ ಹೋರಾಟದ ರೂಪರೇಖೆಯನ್ನು ಪ್ರಕಟಿಸುತ್ತೇವೆ” ಎಂದು ಪ್ರತಿಭಾ ಕುಳಾಯಿ ಹೇಳಿದರು.





