ಬಂಟ್ವಾಳ: ತಾಲೂಕಿನ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಭಾರೀ ನಗದು ಹಾಗೂ ಚಿನ್ನದ ದುರುಪಯೋಗ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 4, 2023 ರಿಂದ ಡಿಸೆಂಬರ್ 19, 2025ರ ನಡುವಿನ ಅವಧಿಯಲ್ಲಿ ಈ ವಂಚನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪುಲುಗುಜ್ಜು ನಿವಾಸಿ ಸುಬ್ರಹ್ಮಣ್ಯಂ (30) ಅವರು ಬ್ಯಾಂಕ್ ಆಫ್ ಬರೋಡಾದ ಪೆರ್ನೆ ಶಾಖೆಯಲ್ಲಿ ಜಂಟಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಎಟಿಎಂ ಮೇಲ್ವಿಚಾರಣೆಯ ಸಂಪೂರ್ಣ ಜವಾಬ್ದಾರಿ ಅವರಿಗಿತ್ತು.
ದೂರಿನ ಪ್ರಕಾರ, ಫೆಬ್ರವರಿ 6, 2024 ರಿಂದ ಡಿಸೆಂಬರ್ 16, 2025ರ ಅವಧಿಯಲ್ಲಿ ಎಟಿಎಂಗೆ ಜಮಾ ಮಾಡಬೇಕಾದ ನಿಗದಿತ ಮೊತ್ತದ ಹಣವನ್ನು ಸಂಪೂರ್ಣವಾಗಿ ಜಮಾ ಮಾಡದೆ, ಕಡಿಮೆ ಮೊತ್ತವನ್ನು ಮಾತ್ರ ಜಮಾ ಮಾಡಿ, ಒಟ್ಟು ₹70,86,000 ನಗದು ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುಂದಾಗಿ, ಡಿಸೆಂಬರ್ 19, 2025 ರಂದು ನಡೆದ ಸೇಫ್ ಲಾಕರ್ ಪರಿಶೀಲನೆಯ ವೇಳೆ, ₹55,000 ಮೌಲ್ಯದ 4.400 ಗ್ರಾಂ ಚಿನ್ನವೂ ಕಾಣೆಯಾಗಿರುವುದು ಪತ್ತೆಯಾಗಿದೆ.
ನಗದು ವ್ಯತ್ಯಾಸ ಪತ್ತೆಯಾಗುತ್ತಿದ್ದಂತೆ, ಡಿಸೆಂಬರ್ 17, 2025 ರಂದು ಆರೋಪಿಯು ಯಾರಿಗೂ ಮಾಹಿತಿ ನೀಡದೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಒಟ್ಟಾರೆ ವಂಚನೆಯ ಮೊತ್ತ ₹71,41,000 ಆಗಿದೆ.
ಈ ಕುರಿತು ಮಂಗಳೂರು ಜೆಪ್ಪುವಿನ ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿ.ಎಸ್. ಚಂದ್ರಶೇಖರ್ (50) ಅವರು ಡಿಸೆಂಬರ್ 23, 2025 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಅಪರಾಧ ಸಂಖ್ಯೆ 121/2025 ರಂತೆ ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)–2023 ರ ಸೆಕ್ಷನ್ 314, 316(5) ಮತ್ತು 318(2) ರ ಅಡಿಯಲ್ಲಿ ತನಿಖೆ ನಡೆಯುತ್ತಿದೆ.





