31 January 2026 | Join group

ಯುಎಇ–ಭಾರತ ಪ್ರಯಾಣದಲ್ಲಿ ಸುವರ್ಣಾವಕಾಶ: ಎರಡು ಹೊಸ ವಿಮಾನಯಾನ ಸಂಸ್ಥೆಗಳ ವಿಮಾನಯಾನ ಸದ್ಯದಲ್ಲೇ...

  • 03 Jan 2026 03:18:09 PM

ಯುಎಇ ಮತ್ತು ಭಾರತದ ನಡುವಿನ ವಿಮಾನ ಪ್ರಯಾಣ ಮಾರ್ಗವು ವಿಶ್ವದ ಅತ್ಯಂತ ಜನನಿಬಿಡ ವಾಯುಯಾನ ಕಾರಿಡಾರ್‌ಗಳಲ್ಲಿ ಒಂದಾಗಿದ್ದು, ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲೇ, 2026ರಿಂದ ಎರಡು ಹೊಸ ವಿಮಾನಯಾನ ಸಂಸ್ಥೆಗಳು ಕಾರ್ಯಾರಂಭಿಸಲು ಮುಂದಾಗಿರುವುದು ಪ್ರಯಾಣಿಕರಲ್ಲಿ ನಿರೀಕ್ಷೆ ಮೂಡಿಸಿದೆ. ಹೊಸ ಸಂಸ್ಥೆಗಳ ಪ್ರವೇಶದಿಂದ ಟಿಕೆಟ್ ದರಗಳಲ್ಲಿ ಇಳಿಕೆ ಸಾಧ್ಯತೆ ಇದೆ ಎನ್ನಲಾಗಿದೆ.

 

'ಅಲ್ ಹಿಂದ್ ಏರ್' ಮತ್ತು 'ಫ್ಲೈಎಕ್ಸ್‌ಪ್ರೆಸ್' ಎಂಬ ಎರಡು ಸಂಸ್ಥೆಗಳು ಯುಎಇ–ಭಾರತ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಲು ಸರ್ಕಾರದ ಅಗತ್ಯ ಅನುಮೋದನೆಗಳನ್ನು ಪಡೆದಿವೆ. ಲಕ್ಷಾಂತರ ಭಾರತೀಯ ವಲಸಿಗರು, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ವ್ಯಾಪಾರ ಪ್ರಯಾಣಿಕರ ಮೇಲೆ ಅವಲಂಬಿತವಾಗಿರುವ ಈ ಮಾರ್ಗದಲ್ಲಿ, ಹೆಚ್ಚುವರಿ ಸಾಮರ್ಥ್ಯ ಮತ್ತು ಹೊಸ ವೇಳಾಪಟ್ಟಿಗಳು ಸೇರಲಿವೆ ಎಂಬ ನಿರೀಕ್ಷೆ ಇದೆ. ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚು ಆಯ್ಕೆಗಳು ಲಭ್ಯವಾಗುವ ಸಾಧ್ಯತೆ ಇದೆ.

 

ಕೇರಳ ಮೂಲದ ಅಲ್ ಹಿಂದ್ ಗ್ರೂಪ್ ಬೆಂಬಲಿತ ಅಲ್ ಹಿಂದ್ ಏರ್, ಕೊಚ್ಚಿಯನ್ನು ಕೇಂದ್ರವಾಗಿಸಿಕೊಂಡು ಪ್ರಾರಂಭಿಕ ಹಂತದಲ್ಲಿ ದೇಶೀಯ ವಿಮಾನ ಸೇವೆಗಳನ್ನು ನಡೆಸಲಿದೆ. ನಂತರ 2026ರ ಕೊನೆಯಲ್ಲಿ ಏರ್‌ಬಸ್ A320neo ವಿಮಾನಗಳ ಮೂಲಕ ದುಬೈ, ಶಾರ್ಜಾ ಮತ್ತು ಅಬುಧಾಬಿಗೆ ನೇರ ಅಂತರರಾಷ್ಟ್ರೀಯ ಮಾರ್ಗಗಳನ್ನು ಆರಂಭಿಸುವ ಯೋಜನೆ ಹೊಂದಿದೆ. ಈಗಾಗಲೇ ವೀಸಾ ಮತ್ತು ಕಾರ್ಮಿಕ ನೇಮಕಾತಿ ಸೇರಿದಂತೆ ಪ್ರಯಾಣ ಸಂಬಂಧಿತ ಸೇವೆಗಳಲ್ಲಿ ಅನುಭವ ಹೊಂದಿರುವುದರಿಂದ, ಈ ಸಂಸ್ಥೆ ಸಮಗ್ರ ಪ್ರಯಾಣ ಪ್ಯಾಕೇಜ್‌ಗಳನ್ನು ಒದಗಿಸುವತ್ತ ಗಮನ ಹರಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

ಇನ್ನೊಂದೆಡೆ, ಹೈದರಾಬಾದ್ ಕೇಂದ್ರವಾಗಿಸಿಕೊಂಡಿರುವ ಫ್ಲೈಎಕ್ಸ್‌ಪ್ರೆಸ್, ಮಧ್ಯ ಮತ್ತು ಪಶ್ಚಿಮ ಭಾರತದ ಪ್ರಾದೇಶಿಕ ನಗರಗಳನ್ನು ಯುಎಇಗೆ ಸಂಪರ್ಕಿಸುವ ಗುರಿ ಹೊಂದಿದೆ. ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸಬೇಕಾದ ಅವಶ್ಯಕತೆ ಇಲ್ಲದೆ, ಸಣ್ಣ ನಗರಗಳಿಂದಲೇ ನೇರವಾಗಿ ಪ್ರಯಾಣಿಸುವ ಅವಕಾಶ ಒದಗಿಸುವುದು ಇದರ ಉದ್ದೇಶ. ಪ್ರಯಾಣಿಕರು ಮತ್ತು ಸರಕುಗಳನ್ನು ಒಟ್ಟಿಗೆ ಸಾಗಿಸುವ ಮಾದರಿಯ ಮೂಲಕ ಕಾರ್ಯಾಚರಣೆ ವೆಚ್ಚವನ್ನು ನಿಯಂತ್ರಿಸಿ, ಟಿಕೆಟ್ ದರಗಳನ್ನು ಸ್ಪರ್ಧಾತ್ಮಕವಾಗಿರಿಸಲು ಸಂಸ್ಥೆ ಯೋಜಿಸಿದೆ ಎನ್ನಲಾಗಿದೆ.

 

ವಿಮಾನಯಾನ ತಜ್ಞರ ಪ್ರಕಾರ, ಹೊಸ ಸಂಸ್ಥೆಗಳ ಪ್ರವೇಶದಿಂದ ಸ್ಪರ್ಧೆ ಹೆಚ್ಚಾಗುವುದು ಸಹಜ. ಇದರಿಂದಾಗಿ ಕೆಲವು ಮಾರ್ಗಗಳಲ್ಲಿ ದರಗಳು ತಗ್ಗುವ ಸಾಧ್ಯತೆ ಇದ್ದರೂ, ಇಂಧನ ವೆಚ್ಚ, ವಿಮಾನ ನಿಲ್ದಾಣ ಶುಲ್ಕ ಮತ್ತು ಕಾರ್ಯಾಚರಣಾ ಖರ್ಚುಗಳಂತಹ ಅಂಶಗಳು ದರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ದರ ಇಳಿಕೆ ಎಲ್ಲ ಮಾರ್ಗಗಳಲ್ಲೂ ಅಥವಾ ತಕ್ಷಣವೇ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯಪಟ್ಟಿದ್ದಾರೆ.

 

ಒಟ್ಟಾರೆ, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ಕಾರ್ಯಾರಂಭಿಸುವುದರಿಂದ ಯುಎಇ–ಭಾರತ ವಾಯುಯಾನ ಮಾರುಕಟ್ಟೆಯಲ್ಲಿ ಹೊಸ ಚಲನೆ ಮೂಡುವ ನಿರೀಕ್ಷೆ ಇದೆ. ಹೆಚ್ಚುವರಿ ಆಯ್ಕೆಗಳು ಮತ್ತು ಹೊಸ ಸಂಪರ್ಕಗಳು ಪ್ರಯಾಣಿಕರಿಗೆ ಅನುಕೂಲಕರವಾಗಬಹುದಾದರೂ, ಟಿಕೆಟ್ ದರಗಳ ಮೇಲೆ ಇದರ ಪರಿಣಾಮ ಹೇಗಿರಲಿದೆ ಎಂಬುದು ಸಂಸ್ಥೆಗಳ ಕಾರ್ಯಾಚರಣೆ ಆರಂಭವಾದ ಬಳಿಕವೇ ಸ್ಪಷ್ಟವಾಗಲಿದೆ.