ಕಾರ್ಕಳ: ಕಳೆದ ಮಂಗಳೂರಿನ ಕುಡ್ಲ ಕಂಬಳದಲ್ಲಿ “ಕಂಬಳದ ಬಿಷ್ಮ” ಎಂದೇ ಖ್ಯಾತಿ ಪಡೆದ ಹಿರಿಯ ತೀರ್ಪುಗಾರ ಪ್ರೊ. ಗುಣಪಾಲ ಕಡಂಬರ ಅವರಿಗೆ ಅವಮಾನವಾದ ಘಟನೆಯಿಂದ ಕಡಂಬರ ಅಭಿಮಾನಿಗಳು ತೀವ್ರ ಆಕ್ರೋಶ ಮತ್ತು ಬೇಸರಕ್ಕೆ ಒಳಗಾಗಿದ್ದರು.
ಅವಮಾನಿಸಿದ ವ್ಯಕ್ತಿಗಳು ಈ ವಾರ ನಡೆಯುವ ಮಿಯಾರ್ ಕಂಬಳದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂಡಬಿದ್ರೆಯಲ್ಲಿ ಕಂಬಳ ಕೋಣದ ಹಲವಾರು ಗಣ್ಯರು ಸೇರಿಕೊಂಡು, ಕಡಂಬರಿಗೆ ನಡೆದ ಅನ್ಯಾಯವನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ, ಅವಮಾನ ಮಾಡಿದ ಲೋಕೇಶ್ ಶೆಟ್ಟಿ ಮತ್ತು ಅರುಣ್ ಶೆಟ್ಟಿ ಇಬ್ಬರನ್ನೂ ಕಂಬಳ ಸಮಿತಿಯಿಂದ ಉಚ್ಚಾಟಿಸಬೇಕು ಹಾಗೂ ಮಿಯಾರ್ ಕಂಬಳದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿಸಬೇಕು ಎಂದು ಒತ್ತಾಯಿಸಿದ್ದರು.
ಇಂದು ನಡೆದ ಮಿಯಾರ್ ಕಂಬಳದ ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಅವರು ಗುಣಪಾಲ ಕಡಂಬರ ಅವರ ಕಾಲಿಗೆ ನಮಸ್ಕರಿಸಿ ಕ್ಷಮೆಯಾಚನೆ ಮಾಡಿದ್ದಾರೆ. ನಂತರ ಮಾತನಾಡಿ ಈ ಹಿಂದೆ ನಡೆದಿರುವ ಘಟನೆ ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ನಡೆದಿದೆ. ಇನ್ನು ಮುಂದೆ ಈ ರೀತಿ ನಡೆಯದೆ, ಜೀವನ ಪರ್ಯಂತ ಕಂಬಳ ಕೂಟದಲ್ಲಿ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಇದರೊಂದಿಗೆ ಕಂಬಳದಲ್ಲಿ ಉಂಟಾಗಿದ್ದ ವಿವಾದ ಸದ್ಯಕ್ಕೆ ಸುಖಾಂತ್ಯ ಕಂಡಿದೆ.
ಇದಕ್ಕೂ ಮೊದಲು ಕಂಬಳ ಜಿಲ್ಲಾಧ್ಯಕ್ಷರಾದ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳದಲ್ಲಿ ಇಂತಹ ಘಟನೆಗಳು ನಡೆಯುವುದು ಸರ್ವೇಸಾಮಾನ್ಯವಾದರೂ, ನಮ್ಮೆಲ್ಲರ ಹಿರಿಯರು ಹಾಗೂ ಕಂಬಳಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಕಂಬಳದ ಭೀಷ್ಮ ಗುಣಪಾಲ ಕಡಂಬರ ಅವರಿಗೆ ಅವಮಾನವಾಗಿರುವುದು ನಮಗೆಲ್ಲರಿಗೂ ಅತೀವ ಬೇಸರ ತಂದಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.





