31 January 2026 | Join group

ಭಾರತೀಯರ ಗಡಿಪಾರು: 2025ರಲ್ಲಿ ಸೌದಿ ಅಗ್ರಸ್ಥಾನ - ಅಮೇರಿಕಾ,ಯುಎಇಗಿಂತಲೂ ಹೆಚ್ಚು - ಇಲ್ಲಿದೆ ವಿವರ

  • 06 Jan 2026 02:12:47 PM

ಮಂಗಳೂರು, ನವದೆಹಲಿ: 2025ರಲ್ಲಿ ವಿದೇಶಗಳಿಂದ ಗಡೀಪಾರುಗೊಂಡ ಭಾರತೀಯರ ಸಂಖ್ಯೆಯಲ್ಲಿ ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ರಾಜ್ಯಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

 

81 ದೇಶಗಳ ಅಂಕಿಅಂಶಗಳ ಅಧ್ಯಯನದ ಪ್ರಕಾರ, 2025ರಲ್ಲಿ ಜಾಗತಿಕವಾಗಿ 24,600ಕ್ಕೂ ಹೆಚ್ಚು ಭಾರತೀಯರನ್ನು ಗಡೀಪಾರು ಮಾಡಲಾಗಿದೆ. ಸೌದಿ ಅರೇಬಿಯಾದಲ್ಲಿ ಮಾತ್ರ ಒಟ್ಟು 10,884 ಭಾರತೀಯರನ್ನು ಗಡೀಪಾರು ಮಾಡಲಾಗಿದೆ. ಇದರಲ್ಲಿ ರಿಯಾದ್ ನಿಂದ 7,019 ಜನ ಮತ್ತು ಜಿದ್ದಾ ದಿಂದ 3,865 ಜನರು ಸೇರಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ.

 

ಅಮೆರಿಕದಲ್ಲಿ ವಲಸೆ ವಿರುದ್ಧ ಕಠಿಣ ಕ್ರಮಗಳಿದ್ದರೂ ಸಹ, 2025ರಲ್ಲಿ ಅಲ್ಲಿಂದ 3,812 ಭಾರತೀಯರನ್ನು ಮಾತ್ರ ವಾಪಸ್ ಕಳುಹಿಸಲಾಗಿದೆ. ಈ ಹೋಲಿಕೆಯಲ್ಲಿ ಸೌದಿ ಅಗ್ರಸ್ಥಾನದಲ್ಲಿದೆ.

 

ಯುಎಇ ಸ್ಥಿತಿ

ಯುಎಇಯಿಂದ 2025ರಲ್ಲಿ 1,469 ಭಾರತೀಯರನ್ನು ಗಡೀಪಾರು ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಯುಎಇಯಿಂದ ಗಡೀಪಾರುಗೊಂಡವರ ಸಂಖ್ಯೆ ಒಟ್ಟು 3,979. 2024ರಲ್ಲಿ ಯುಎಇ ಸರ್ಕಾರವು ವೀಸಾ ಕ್ಷಮಾದಾನ ಯೋಜನೆ ಜಾರಿಗೆ ತಂದಿದ್ದು, ಅಕ್ರಮ ವಾಸ್ತವ್ಯದಲ್ಲಿದ್ದವರಿಗೆ ದಂಡವಿಲ್ಲದೆ ತಮ್ಮ ಸ್ಥಿತಿಯನ್ನು ಸರಿಪಡಿಸಲು ಅಥವಾ ದೇಶ ತೊರೆಯಲು ಅವಕಾಶ ನೀಡಲಾಗಿತ್ತು.

 

ಗಡೀಪಾರುಗೆ ಪ್ರಮುಖ ಕಾರಣಗಳು

MEA ಮಾಹಿತಿ ಪ್ರಕಾರ, ಗಡೀಪಾರಿಗೆ ಕಾರಣವಾದ ಪ್ರಮುಖ ಅಂಶಗಳು:

 • ವೀಸಾ ಅವಧಿ ಮೀರಿದ ವಾಸ್ತವ್ಯ

 • ನಕಲಿ ಉದ್ಯೋಗ ಆಫರ್‌ಗಳು

 • ಪರವಾನಗಿ ಇಲ್ಲದೆ ಕೆಲಸ

 • ಉದ್ಯೋಗದಾತರಿಂದ ಪರಾರಿಯಾಗುವುದು

 • ಕಾರ್ಮಿಕ ಮತ್ತು ವಲಸೆ ನಿಯಮ ಉಲ್ಲಂಘನೆ

 

ಎಚ್ಚರಿಕೆ ನೀಡಿದ MEA

ವಿದೇಶಕ್ಕೆ ತೆರಳುವ ಭಾರತೀಯರು ನಕಲಿ ಉದ್ಯೋಗ ದಂಧೆಗಳಿಗೆ ಬಲಿಯಾಗದಂತೆ ಎಚ್ಚರಿಕೆಯಿಂದಿರಬೇಕು ಎಂದು MEA ಮನವಿ ಮಾಡಿದೆ. ಉದ್ಯೋಗ ಸ್ವೀಕರಿಸುವ ಮೊದಲು ಏಜೆಂಟ್ ಮತ್ತು ಕಂಪನಿಗಳ ಹಿನ್ನೆಲೆ ಪರಿಶೀಲನೆ ಕಡ್ಡಾಯ ಎಂದು ತಿಳಿಸಿದೆ. ಅಕ್ಟೋಬರ್ 2025ರ ವೇಳೆಗೆ, e-Migrate ಪೋರ್ಟಲ್‌ನಲ್ಲಿ 3,505 ನೋಂದಾಯಿಸದ ಏಜೆಂಟ್‌ಗಳು ಪತ್ತೆಯಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ತೆಗೆದುಕೊಳ್ಳಲಾಗಿದೆ.

ಮೂಲ: ಸುದಾವಾಣಿ | MEA ರಾಜ್ಯಸಭೆ ಮಾಹಿತಿ ಆಧಾರ