31 January 2026 | Join group

ಸಂಚಾರದ ಮಧ್ಯೆ ಮಾನವೀಯತೆ: ವೃದ್ಧೆಯನ್ನು ರಸ್ತೆ ದಾಟಿಸಿದ ಮಂಗಳೂರು ಟ್ರಾಫಿಕ್ ಪೊಲೀಸ್

  • 06 Jan 2026 03:09:44 PM

ಮಂಗಳೂರು: ವಾಹನ ಸಂಚಾರದ ಗದ್ದಲದ ನಡುವೆಯೇ ಮಾನವೀಯತೆಯೊಂದು ಮನಸೂರೆಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

 

ರಸ್ತೆ ದಾಟಲು ಅಸಹಾಯಕವಾಗಿದ್ದ ವೃದ್ಧೆಯನ್ನು ಮಂಗಳೂರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಸುರಕ್ಷಿತವಾಗಿ ರಸ್ತೆ ದಾಟಿಸಲು ನೆರವಾದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

 

@mangaloretrafficpoliceofficial ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು, “Protect, Serve, Justice, Order, Duty, Courage, Community, Peace, Security, Law, Guardian, Hero” ಎಂಬ ಪದಗಳು ಬರೆಯಲಾಗಿದೆ. ಇದು ಪೊಲೀಸ್ ಕರ್ತವ್ಯದ ನಿಜವಾದ ಅರ್ಥವನ್ನು ಪ್ರತಿಬಿಂಬಿಸುತ್ತಿದೆ.

 

ಕಾನೂನು ಜಾರಿಗೊಳಿಸುವುದಷ್ಟೇ ಅಲ್ಲ, ಅಗತ್ಯ ಸಮಯದಲ್ಲಿ ಸಹಾಯ ಹಸ್ತ ಚಾಚುವುದೇ ನಿಜವಾದ ಸೇವೆ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ. ಮಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯ ಈ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.