31 January 2026 | Join group

'ನರಿಂಗಾಣ ಕಂಬಳ'ದಲ್ಲಿ ಕೋಣದ ಯಜಮಾನರೆಲ್ಲರೂ ವಿಜೇತರೇ? ಸೋಲು–ಗೆಲುವಿನಾಚೆಗೂ ಸಂಭ್ರಮ

  • 07 Jan 2026 10:34:48 AM

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದ ನರಿಂಗಾನದಲ್ಲಿ 4 ವರ್ಷದ ಲವ-ಕುಶ ಜೋಡುಕರೆ ಕಂಬಳ ‘ನರಿಂಗಾನ ಕಂಬಳೋತ್ಸವ’ ಇದೇ ಬರುವ 10ನೇ ತಾರೀಕಿಗೆ ಅದ್ದೂರಿಯಾಗಿ ನಡೆಯಲಿದೆ. ಕರ್ನಾಟಕ ರಾಜ್ಯದ ಸ್ಪೀಕರ್ ಯು.ಟಿ. ಖಾದರ್ ರವರ ಗೌರವಾಧ್ಯಕ್ಷತೆಯಲ್ಲಿ ಮತ್ತು ಪ್ರಶಾಂತ್ ಕಾಜವರವರ ಅಧ್ಯಕ್ಷತೆಯಲ್ಲಿ ಈ ಕಂಬಳೋತ್ಸವ ಆಯೋಜಿಸಲಾಗಿದೆ.

 

ಕಳೆದ ಬಾರಿ ನಡೆದ ಕಂಬಳಕ್ಕೆ ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನರಿಂಗಾಣ ಕಂಬಳಕ್ಕೆ ಹೆಚ್ಚಿನ ಮೆರುಗನ್ನು ನೀಡಿತ್ತು. ಈ ಬಾರಿ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಲಿದ್ದು, ಅದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.

 

ನರಿಂಗಾನ ಕಂಬಳದ ಒಂದು ದೊಡ್ಡ ವಿಶೇಷತೆ ಎಂದರೆ, ಪಾಲ್ಗೊಳ್ಳುವ ಯಾವುದೇ ಕೋಣದ ಯಜಮಾನರು ಬರಿಗೈಯಲ್ಲಿ ಮನೆಗೆ ಹೋಗಬಾರದು ಎನ್ನುವುದು ಕಂಬಳ ಸಮಿತಿಯ ಮೂಲ ಉದ್ದೇಶ. ತಾವು ಪ್ರೀತಿಯಿಂದ ಸಾಕಿದ ಕೋಣಗಳು ಫೈನಲ್ ಹಂತಕ್ಕೆ ಬರದೇ ಇರಬಹುದು, ಕೆಲವೊಮ್ಮೆ ಮೊದಲ ಸುತ್ತಿನಲ್ಲೇ ಸೋಲಬಹುದು. ಆದರೂ ಪಾಲ್ಗೊಳ್ಳುವ ಎಲ್ಲಾ ಕೋಣದ ಯಜಮಾನರು ತೃಪ್ತಿಯಿಂದ ಮರಳಿ ಹೋಗಬೇಕು ಎನ್ನುವುದೇ ಈ ಕಂಬಳ ಆಯೋಜಕರ ಕನಸು.

 

ಅದೇ ಕಾರಣಕ್ಕೆ, ನರಿಂಗಾನ ಕಂಬಳದಲ್ಲಿ ಹಿಂದಿನಂತೆ ಈ ಬಾರಿಯೂ ಪಾಲ್ಗೊಳ್ಳುವ ಎಲ್ಲಾ ಕೋಣದ ಯಜಮಾನರುಗಳಿಗೆ ಬೆಳ್ಳಿಯ ಪದಕದೊಂದಿಗೆ ಒಂದು ಟ್ರೋಫಿಯನ್ನು ನೀಡಿ ಗೌರವಿಸಲಾಗುತ್ತದೆ. ಕೋಣದ ಯಜಮಾನರುಗಳ ತೃಪ್ತಿಯೇ ನಮ್ಮ ಉದ್ದೇಶ ಎಂದು ನರಿಂಗಾನ ಕಂಬಳದ ಅಧ್ಯಕ್ಷರು ತಿಳಿಸಿದ್ದಾರೆ.

 

ಯಾವುದೇ ಜನವಸತಿ ಇಲ್ಲದ ಸರಕಾರಿ ಗುಡ್ಡಗಾಡು ಪ್ರದೇಶವನ್ನು ಆಯ್ಕೆ ಮಾಡಿ ಅಲ್ಲಿ ಕಂಬಳ ನಡೆಸುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷತೆ. ಮೊದಲ ವರ್ಷದ ಕಂಬಳದ ಸಂಪೂರ್ಣ ತಯಾರಿ ಕೇವಲ 27 ದಿನಗಳಲ್ಲಿ ಪೂರ್ಣಗೊಂಡಿದ್ದು ಕೂಡ ಈ ಕಂಬಳದ ಹೆಮ್ಮೆಯ ಸಂಗತಿ.

 

ಈ ವರ್ಷವೂ ಪ್ರತಿ ವರ್ಷದಂತೆ ಹೆಚ್ಚಿನ ಸಂಖ್ಯೆಯ ಕಂಬಳ ಕೋಣಗಳು ಮತ್ತು ಅಪಾರ ಸಂಖ್ಯೆಯ ಕಂಬಳ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ನರಿಂಗಾನ ಕಂಬಳೋತ್ಸವ ಸಮಿತಿಯವರು ತಿಳಿಸಿದ್ದಾರೆ. ಕಳೆದ ವರ್ಷ ಒಟ್ಟು 267 ಜೊತೆ ಕೋಣಗಳು ಪಾಲ್ಗೊಂಡಿದ್ದವು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.