ಮಂಗಳೂರು: ಕಳೆದ 20 ವರ್ಷಗಳಿಂದ ಟೊಯೋಟಾ ಇನ್ನೋವಾ ಕ್ರಿಸ್ಟಾ ಭಾರತೀಯ ರಸ್ತೆಗಳನ್ನು ಆಳಿದೆ. ಸಚಿವರು ಹಾಗೂ ಟ್ಯಾಕ್ಸಿ ಚಾಲಕರ ಮೊದಲ ಆಯ್ಕೆಯಾಗಿತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾ. ಒಂದು ರೀತಿಯಲ್ಲಿ ಅದು ರಾಜನಂತೆ ಆಡಳಿತ ನಡೆಸಿತು.
ಇನ್ನೋವಾ ಹೈಕ್ರಾಸ್ ಮಾರುಕಟ್ಟೆಗೆ ಬಂದರೂ, ಬಹುತೇಕ ಜನರಿಗೆ ಇನ್ನೋವಾ ಕ್ರಿಸ್ಟಾವೇ ಹೆಚ್ಚು ಇಷ್ಟವಾಯಿತು. ವಿಧಾನಸೌಧ ಪಾರ್ಕಿಂಗ್‌ನಿಂದ ಹಿಡಿದು ಟ್ಯಾಕ್ಸಿ ನಿಲ್ದಾಣಗಳವರೆಗೆ ಎಲ್ಲೆಡೆ ಕ್ರಿಸ್ಟಾವನ್ನು ನೋಡಬಹುದಾಗಿತ್ತು. ಸಾರ್ವಜನಿಕ ಬೇಡಿಕೆಯ ಕಾರಣಕ್ಕೆ ಒಂದು ಹಂತದಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳುತ್ತಿದ್ದ ಕಂಪನಿ ಮತ್ತೆ ಟೊಯೋಟಾ ಮತ್ತೆ ಕ್ರಿಸ್ಟಾ ಉತ್ಪಾದನೆಯನ್ನು ಆರಂಭಿಸಿದೆ ಎಂಬ ವರದಿಗಳಿವೆ. ಆದರೆ ಈಗ ಟೊಯೋಟಾ ಶೀಘ್ರದಲ್ಲೇ CAFE 3 ನಿಯಮಗಳನ್ನು ಅನುಸರಿಸಬೇಕಾಗಿದೆ.
ಭಾರತ ಸರ್ಕಾರದ ನಿಯಮದಂತೆ, 2027ರಿಂದ ಪ್ರತಿ ಕಿಲೋಮೀಟರ್‌ಗೆ 91.7 ಗ್ರಾಂ ಕಾರ್ಬನ್ ಡೈಆಕ್ಸೈಡ್ ಮಾತ್ರ ಉತ್ಸರ್ಜನೆ ಆಗಬೇಕು. ಆದರೆ ಇನ್ನೋವಾ ಕ್ರಿಸ್ಟಾ ಸುಮಾರು 175 ಗ್ರಾಂ CO₂ ಹೊರಸೂಸುತ್ತದೆ. ಇನ್ನೋವಾ ಹೈಕ್ರಾಸ್ ಸುಮಾರು 104 ಗ್ರಾಂ CO₂ ಹೊರಸೂಸುತ್ತದೆ. ಈ ನಿಯಮ ಉಲ್ಲಂಘಿಸಿದರೆ, ಪ್ರತಿ ಕಾರಿಗೆ ₹25,000 ರಿಂದ ₹50,000 ದಂಡ ವಿಧಿಸುವ ಸಾಧ್ಯತೆ ಇದೆ.
ಈ ಕಾರಣದಿಂದಾಗಿ ಟೊಯೋಟಾ ಬಳಿ ಇನ್ನೋವಾ ಕ್ರಿಸ್ಟಾ ಡೀಸೆಲ್ ಉತ್ಪಾದನೆಯನ್ನು ನಿಲ್ಲಿಸುವುದರ ಹೊರತು ಬೇರೆ ಆಯ್ಕೆಯಿಲ್ಲ. ಒಮ್ಮೆ ಟೊಯೋಟಾ ಕ್ವಾಲಿಸ್ ಗರಿಷ್ಠ ಜನಪ್ರಿಯತೆಯಲ್ಲಿದ್ದ ಕಾಲವಿತ್ತು. ಆದರೂ ಅದನ್ನು ಸ್ಥಗಿತಗೊಳಿಸಿ ಟೊಯೋಟಾ ಇನ್ನೋವಾವನ್ನು ಬಿಡುಗಡೆ ಮಾಡಿತು. 2005 ರಿಂದ 2015ರವರೆಗೆ ಇನ್ನೋವಾ ಭಾರತದ ಎಲ್ಲಾ ರಸ್ತೆಗಳಲ್ಲಿ ರಾಜನಂತೆ ಓಡಾಡಿತು. 2016ರಲ್ಲಿ ಇನ್ನೋವಾ ಕ್ರಿಸ್ಟಾ ಬಿಡುಗಡೆಯಾಯಿತು. ಇಂದಿಗೂ ಹಲವಾರು ಗ್ರಾಹಕರು ಶಕ್ತಿಶಾಲಿ ಎಂಜಿನ್ ಕಾರಣದಿಂದ ಹೈಕ್ರಾಸ್‌ಗಿಂತ ಕ್ರಿಸ್ಟಾವನ್ನೇ ಮೆಚ್ಚುತ್ತಾರೆ.
ಆದರೆ ಕೆಲವು ತಜ್ಞರು ಪ್ರಶ್ನೆ ಎತ್ತುತ್ತಾರೆ. 2.4 ಲೀಟರ್ ಎಂಜಿನ್ ಹೊಂದಿರುವ ಇನ್ನೋವಾ ಕ್ರಿಸ್ಟಾವನ್ನು ನಿಲ್ಲಿಸಿದರೆ, 2.8 ಲೀಟರ್ ಎಂಜಿನ್ ಹೊಂದಿರುವ ಫಾರ್ಚುನರ್ ಮತ್ತು ಹೈಲಕ್ಸ್‌ಗಳ ಗತಿ ಏನು? ವಾಸ್ತವವಾಗಿ, ಭಾರತದಲ್ಲಿ ಟೊಯೋಟಾದ ಅತ್ಯಧಿಕ ಮಾರಾಟವಾಗುವ ಕಾರುಗಳು ಇನ್ನೋವಾ ಮತ್ತು ಫಾರ್ಚುನರ್. ಉಳಿದ ಹೆಚ್ಚಿನ ಮಾದರಿಗಳು ಮಾರುತಿ ಕಾರುಗಳನ್ನು ಮರುಬ್ರಾಂಡಿಂಗ್ ಮಾಡಿ ಟೊಯೋಟಾ ಲೋಗೋ ಹಾಕಿ ಮಾರಾಟ ಮಾಡಲಾಗುತ್ತದೆ.
CAFE 3 ಎಂಜಿನ್ ಎಂದರೇನು?
CAFE 3 ಎಂದರೆ Corporate Average Fuel Efficiency – ಹಂತ 3. ಇದು ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದೆ. ಕಂಪನಿಯ ಒಟ್ಟು CO₂ ಉತ್ಸರ್ಜನೆಯನ್ನು ಇದು ಮೇಲ್ವಿಚಾರಣೆ ಮಾಡುತ್ತದೆ. CAFE 3 ಒಂದು ಕಾರಿಗೆ ಸಂಬಂಧಿಸಿದ ನಿಯಮವಲ್ಲ, ಇದು ಕಂಪನಿ ಮಟ್ಟದ ನಿಯಮವಾಗಿದೆ. ಕಂಪನಿ ಮಾರಾಟ ಮಾಡುವ ಎಲ್ಲಾ ವಾಹನಗಳ ಸರಾಸರಿ ಕಾರ್ಬನ್ ಉತ್ಸರ್ಜನೆಯನ್ನು ಲೆಕ್ಕ ಹಾಕಲಾಗುತ್ತದೆ. ಈ ಮಿತಿಯನ್ನು ಮೀರೆದರೆ ಕಂಪನಿಗೆ ದಂಡ ವಿಧಿಸಲಾಗುತ್ತದೆ.





