ಇತ್ತೀಚಿನ ದಿನಗಳಲ್ಲಿ ಕನಿಷ್ಠ ಒಂದಾದರೂ ನಿಧಿ ಸಿಗಲಿ ಎಂದು ಕನಸು ಕಾಣುವ ಜನರ ಮಧ್ಯೆ, ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದ ಘಟನೆ ಎಲ್ಲರ ಗಮನ ಸೆಳೆದಿದೆ. ಹೊಸ ಮನೆ ನಿರ್ಮಾಣಕ್ಕಾಗಿ ಅಗೆಯುತ್ತಿದ್ದ ವೇಳೆ ನಿಧಿಯೊಂದು ಪತ್ತೆಯಾಗಿದ್ದು, ಇದೀಗ ಇಡೀ ಜಿಲ್ಲೆಯಾದ್ಯಂತ ಈ ಕುರಿತು ಚರ್ಚೆಗಳು ನಡೆಯುತ್ತಿವೆ.
ಇದೇ ಸಂದರ್ಭದಲ್ಲಿ, ಪ್ರಜ್ವಲ್ ಎಂಬ ಯುವಕನು ಮನೆ ನಿರ್ಮಾಣಕ್ಕಾಗಿ ಗುಂಡಿ ತೆಗೆಯುತ್ತಿದ್ದ ವೇಳೆ ನಿಧಿ ಸಿಕ್ಕಿರುವುದು ವಿಶೇಷ ಗಮನಸೆಳೆದಿದೆ. ಇನ್ನೂ ಹೆಚ್ಚು ಪ್ರಶಂಸೆಗೆ ಪಾತ್ರವಾಗಿರುವ ಸಂಗತಿ ಎಂದರೆ, ಸಿಕ್ಕ ನಿಧಿಯನ್ನು ಯಾವುದೇ ಹಿಂಜರಿಕೆ ಇಲ್ಲದೆ ನೇರವಾಗಿ ಸರ್ಕಾರದ ಸುಪರ್ದಿಗೆ ಒಪ್ಪಿಸಿರುವುದು. ಈ ನಿಷ್ಠಾವಂತ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಜ್ವಲ್‌ನ ಪ್ರಾಮಾಣಿಕತೆಗೆ ಗೌರವ ಸೂಚಿಸಿರುವ ಕಾನೂನು ಸಚಿವ ಬಿ.ಹೆಚ್. ಪಾಟೀಲ್, ಆತನ ಕುಟುಂಬಸ್ಥರನ್ನು ಭೇಟಿ ಮಾಡಿ ಸರಕಾರದ ನೆರವಿನ ಭರವಸೆ ನೀಡಿದ್ದಾರೆ. ಕಾಲೇಜೊಂದರಲ್ಲಿ ಆತನ ಪಿಯುಸಿವರೆಗಿನ ವಿದ್ಯಾಭ್ಯಾಸದ ಸಂಪೂರ್ಣ ಹೊಣೆ ಹೊರುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಸಂತಸಗೊಂಡಿರುವ ಪ್ರಜ್ವಲ್, ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾನೆ.
ಇದಲ್ಲದೆ, ಪ್ರಜ್ವಲ್ ಕುಟುಂಬಕ್ಕೆ ಸರ್ಕಾರದಿಂದ ನೆರವು ನೀಡಬೇಕೆಂದು ಅಲ್ಲಿನ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ. ಮನೆ ಅಗೆದುತ್ತಿದ್ದ ವೇಳೆ ಸಿಕ್ಕ 470 ಗ್ರಾಂ ಚಿನ್ನದ ಮೌಲ್ಯ ಸುಮಾರು 65 ಲಕ್ಷ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಾನೂನು ಸಚಿವ ಬಿ.ಹೆಚ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಾತತ್ವ ಇಲಾಖೆ ತನಿಖೆ ಪೂರ್ಣಗೊಳಿಸಿದ ಬಳಿಕ ಮುಂದಿನ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.





