31 January 2026 | Join group

ಸಾರಿಗೆ ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆಗೆ ಬ್ರೇಕ್: QR ಕೋಡ್–ಕಾರ್ಡ್ ಪಾವತಿ ವ್ಯವಸ್ಥೆ

  • 14 Jan 2026 12:47:05 AM

ಮಂಗಳೂರು: ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ಹಣ ಕೊಡುವುದು–ಪಡೆಯುವುದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು ಬಸ್ ನಿರ್ವಾಹಕರ ನಡುವೆ ಆಗಾಗ್ಗೆ ವಾಗ್ವಾದಗಳು ನಡೆಯುವುದು ಹೊಸದಲ್ಲ. ಸರಿಯಾದ ಚಿಲ್ಲರೆ ಇಲ್ಲದ ಕಾರಣ ಅನಗತ್ಯ ಗೊಂದಲಗಳು ಉಂಟಾಗಿ, ಕೆಲವೊಮ್ಮೆ ಪ್ರಯಾಣವೇ ಅಸಹನೀಯವಾಗುತ್ತಿತ್ತು.

 

ಈ ಚಿಲ್ಲರೆ ಸಮಸ್ಯೆಗೆ ಪೂರ್ಣ ವಿರಾಮ ಬೀಳಿಸುವ ಉದ್ದೇಶದಿಂದ ಕರ್ನಾಟಕ ಸಾರಿಗೆ ಇಲಾಖೆ ನಗದುರಹಿತ (Cashless) ಪಾವತಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ಹೊಸ ವ್ಯವಸ್ಥೆಯಡಿ ಪ್ರಯಾಣಿಕರು ಬಸ್‌ನಲ್ಲಿ ಟಿಕೆಟ್ ಪಡೆಯುವ ವೇಳೆ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಎಟಿಎಂ/ಡೆಬಿಟ್ ಕಾರ್ಡ್ ಸ್ವೈಪ್ ಮಾಡುವ ಮೂಲಕ ಸುಲಭವಾಗಿ ಹಣ ಪಾವತಿಸಬಹುದಾಗಿದೆ.

 

ಸಾರಿಗೆ ಇಲಾಖೆಯ ಯೋಜನೆಯಂತೆ, ಇನ್ನು ಮುಂದೆ ಬಸ್ ನಿರ್ವಾಹಕರು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳ ಮೂಲಕ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದ ಪ್ರಯಾಣಿಕರು ಚಿಲ್ಲರೆ ಹಣದ ತಲೆನೋವಿಲ್ಲದೆ ನೆಮ್ಮದಿಯಿಂದ ಪ್ರಯಾಣಿಸಬಹುದಾಗಿದ್ದು, ಬಸ್ ನಿರ್ವಾಹಕರಿಗೂ ಚಿಲ್ಲರೆ ವಿಚಾರದಿಂದಾಗುವ ಜಗಳ–ಗೊಂದಲಗಳು ತಪ್ಪುವ ಸಾಧ್ಯತೆ ಇದೆ.

 

ಪ್ರಸ್ತುತ ಈ ಡಿಜಿಟಲ್ ಪಾವತಿ ವ್ಯವಸ್ಥೆ ರಾಜ್ಯದ ಕೆಲವು ಭಾಗಗಳಲ್ಲಿ ಹಂತ ಹಂತವಾಗಿ ಜಾರಿಗೆ ಬರುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಈಗಾಗಲೇ ಈ ಸೌಲಭ್ಯ ದೊರೆಯುತ್ತಿದೆ. ಈಗಾಗಲೇ ಎಲ್ಲಾ ಖಾಸಗಿ ಬಸ್‌ಗಳಲ್ಲಿ QR ಕೋಡ್ ಮೂಲಕ ಪಾವತಿ ವ್ಯವಸ್ಥೆಯನ್ನು ಪ್ರಯೋಗಾತ್ಮಕವಾಗಿ ಅಳವಡಿಸಲಾಗಿದೆ.

 

ಸಾರಿಗೆ ಇಲಾಖೆ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದಲ್ಲಿ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಸ್ ಪ್ರಯಾಣಿಕರಿಗೆ ಇದು ದೊಡ್ಡ ಅನುಕೂಲವಾಗಲಿದೆ. ವಿಶೇಷವಾಗಿ ನಗರ ಹಾಗೂ ಗ್ರಾಮಾಂತರ ಮಾರ್ಗಗಳಲ್ಲಿ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೆ ಚಿಲ್ಲರೆ ಸಮಸ್ಯೆ ಇತಿಹಾಸವಾಗುವ ನಿರೀಕ್ಷೆ ಇದೆ.

 

ಒಟ್ಟಿನಲ್ಲಿ, ಡಿಜಿಟಲ್ ಇಂಡಿಯಾ ಗುರಿಗೆ ತಕ್ಕಂತೆ ಸಾರಿಗೆ ಇಲಾಖೆಯ ಈ ಕ್ರಮ ಸ್ವಾಗತಾರ್ಹವಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಗೂ ವಿಸ್ತರಿಸಲಿ ಎಂಬುಹುದು ಜನರ ಆಶಯ.