22 June 2026 |

ಸುಳ್ಯದಲ್ಲಿ ಹೃದಯವಿದ್ರಾವಕ ಘಟನೆ: ಆಟವಾಡುತ್ತಿದ್ದ ವೇಳೆ ಕೆರೆಗೆ ಬಿದ್ದ ಅವಳಿ ಮಕ್ಕಳು ಮೃತ್ಯು!

  • 21 Jun 2026 03:33:27 PM

ಸುಳ್ಯ: ಮನೆಯ ಸಮೀಪ ಆಟವಾಡುತ್ತಿದ್ದ ಅವಳಿ ಮಕ್ಕಳಿಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ದುರ್ಘಟನೆ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

 

ಮೃತರನ್ನು ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದ 5 ವರ್ಷದ ಜಶ್ವಿನ್ ಹಾಗೂ ಜಶ್ಚಿತ್ ಎಂದು ಗುರುತಿಸಲಾಗಿದೆ. ಇವರು ಕಡೀರ ನಿವಾಸಿಗಳಾದ ವಸಂತ ಮತ್ತು ದಿವ್ಯ ದಂಪತಿಯ ಪುತ್ರರು.

 

ಮಾಹಿತಿಯ ಪ್ರಕಾರ, ವಸಂತ ಅವರು ವೆಲ್ಡಿಂಗ್ ಕೆಲಸಕ್ಕೆ ತೆರಳಿದ್ದರೆ, ದಿವ್ಯ ಅವರು ಕೂಲಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಕ್ಕಳು ಮನೆಯಲ್ಲಿ ಅಜ್ಜ-ಅಜ್ಜಿಯರೊಂದಿಗೆ ಇದ್ದರು. ಸಂಜೆ ವೇಳೆ ಮನೆಯ ಸುತ್ತಮುತ್ತ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಅಜಾಗರೂಕತೆಯಿಂದ ಸುಮಾರು 15 ಅಡಿ ಆಳದ ಕೆರೆಗೆ ಬಿದ್ದಿರುವುದಾಗಿ ತಿಳಿದುಬಂದಿದೆ.

 

ಸ್ವಲ್ಪ ಸಮಯದ ಬಳಿಕ ಮಕ್ಕಳು ಕಾಣಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದರು. ಈ ಸಂದರ್ಭದಲ್ಲಿ ಕೆರೆಯೊಳಗೆ ಮಕ್ಕಳ ಶವಗಳು ಪತ್ತೆಯಾಗಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಯಿತು.

 

ಸುದ್ದಿ ತಿಳಿದ ಕೂಡಲೇ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕೆರೆಯಿಂದ ಇಬ್ಬರು ಮಕ್ಕಳ ಮೃತದೇಹಗಳನ್ನು ಹೊರತೆಗೆದರು.