31 January 2026 | Join group

ಉಪ್ಪಿನಂಗಡಿಯಲ್ಲಿ ಬುರ್ಖಾ ಧರಿಸಿ ಬಂದು ಚಿನ್ನಾಭರಣ ಕಳವು : ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆ

  • 29 Apr 2025 11:24:20 AM

ಉಪ್ಪಿನಂಗಡಿ, ಏಪ್ರಿಲ್ 29 : ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು ಮಾಡಿದ ಬುರ್ಖಾ ಧಾರಿ ಮಹಿಳೆಯನ್ನು ಉಪ್ಪಿನಂಗಡಿ ಪೋಲಿಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಏಪ್ರಿಲ್ 17 ರಂದು ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣ ಸಮೀಪದ ಚಿನ್ನಾಭರಣ ಮಳಿಗೆಯಿಂದ 4.80 ಲಕ್ಷ ರೂಪಾಯಿ ಮೌಲ್ಯದ 72 ಗ್ರಾಂ ತೂಕದ ಚಿನ್ನವನ್ನು ಎಗರಿಸಿದ್ದ ಪ್ರಕರಣ ನಡೆದಿತ್ತು. 

 

ಬುರ್ಖಾಧಾರಿ ಮಹಿಳೆಯ ಕಳ್ಳತನದ ಉಪಾಯ 
ಎ. 17ರ ಗುರುವಾರ ಮಧ್ಯಾಹ್ನ 2.30ಕ್ಕೆ ಹಸನ್ ಟವರ್ಸ್‌ನಲ್ಲಿರುವ ದಿನಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಗೆ ಬಂದ ಬುರ್ಖಾ ಧಾರಿ ಮಹಿಳೆ ಮನೆಯಲ್ಲಿ ಮದುವೆ ಕಾರ್ಯಕ್ರಮ ಇದೆ ಮತ್ತು ಅದಕ್ಕೆ 30 ಗ್ರಾಂ ಚಿನಾಭರಣ ಬೇಕಾಗಿದೆ. ನಾನು ಇವತ್ತು ಚಿನ್ನಾಭರಣ ನೋಡಿ ಹೋಗುತ್ತೇನೆ ನಾಳೆ ನನ್ನ ಮನೆಯವರು ಬಂದು ಹಣ ಪಾವತಿ ಮಾಡಿ ತೆಗೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದರಂತೆ. 

 

ದಿನಾರ್ ಗೋಲ್ಡ್ ಅಂಡ್ ಡೈಮಂಡ್ ಮಳಿಗೆಯ ಸಿಬಂದಿಗಳು ಮಹಿಳೆಗೆ ಬೇರೆ ಬೇರೆ ರೀತಿಯ ಬಂಗಾರಗಳನ್ನು ಕಾಣಿಸಿದ್ದು ಕೆಲ ಡಿಸೈನ್ ಬಂಗಾರಗಳನ್ನು ಬುರ್ಖಾಧಾರಿ ಮಹಿಳೆ ಆಯ್ಕೆ ಮಾಡಿದ್ದು, ನನ್ನ ಮನೆಯವರು ನಾಳೆ ಬಂದು ಹಣ ಪಾವತಿ ಮಾಡಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿ ಅಲ್ಲಿಂದ ಹೊರಟಿತ್ತು. ಮಹಿಳೆಯನ್ನು ಆಯಿಷತ್ ಶಮೀಲಾಬಿ ಎಂದು ಗುರುಸಲಾಗಿದೆ ಎಂದು ವರದಿಯಾಗಿದೆ. 

 

ರಾತ್ರಿ ಎಂದಿನಂತೆ ಚಿನ್ನಾಭರಣ ಪರಿಶೀಲನೆ ಸಂದರ್ಭದಲ್ಲಿ 2 ಜೊತೆ 24 ಗ್ರಾಂ ಚಿನ್ನದ ಕಾಲಿನ ಚೈನ್, 16 ಗ್ರಾಂ ತೂಕದ ಚಿನ್ನದ ಸರ ಮತ್ತು 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ಕಾಣೆಯಾಗಿರುವುದು ಕಂಡುಬಂದಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲಾಗಿತ್ತು. 

 

ಉಪ್ಪಿನಂಗಡಿಯಲ್ಲೇ ಕಳ್ಳತನ, ಅಲ್ಲೇ ಮಾರಾಟಕ್ಕೆ ಯತ್ನ 
ಉಪ್ಪಿನಂಗಡಿ ಹಳೆ ಬಸ್ ಸ್ಟಾಂಡ್ ಪಕ್ಕದ ದಿನಾರ್ ಗೋಲ್ಡ್ ಅಂಡ್ ಡೈಮಂಡ್ ಮಳಿಗೆಯಿಂದ ಕಳ್ಳತನ ನಡೆಸಿದ ನಂತರ ಅದೇ ಚಿನ್ನಾಭರಣವನ್ನು ಉಪ್ಪಿನಂಗಡಿ ಸರಕಾರಿ ಶಾಲೆಯ ಪಕ್ಕದಲ್ಲಿರುವ ಚಿನ್ನಾಭರಣ ಅಂಗಡಿಗೆ ಮಾರಾಟ ಮಾಡಲು ಕೊಂಡುಹೋಗಿದ್ದ ಮಹಿಳೆ, ಅಂಗಡಿಯವರು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಧಾವಿಸಿದ ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ವಿಚಾರಿಸಿ ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.