20 September 2026 |

ದಕ್ಷಿಣ ಕನ್ನಡದಲ್ಲಿ 20 ನಕಲಿ ಕ್ಲಿನಿಕ್‌ಗಳಿಗೆ ಬೀಗ; ರಾಜ್ಯದಲ್ಲಿ 582 ಅಕ್ರಮ ಕೇಂದ್ರಗಳ ವಿರುದ್ಧ ಕ್ರಮ

  • 08 Sep 2026 06:21:59 PM

ಮಂಗಳೂರು: ಅರ್ಹ ವೈದ್ಯಕೀಯ ಪದವಿ ಮತ್ತು ನೋಂದಣಿ ಇಲ್ಲದೆ ಚಿಕಿತ್ಸೆ ನೀಡುತ್ತಿದ್ದವರ ವಿರುದ್ಧ ರಾಜ್ಯ ಆರೋಗ್ಯ ಇಲಾಖೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. 2024ರಿಂದ 2026ರ ಅವಧಿಯಲ್ಲಿ ಕರ್ನಾಟಕದಾದ್ಯಂತ 582 ಅಕ್ರಮ ಕ್ಲಿನಿಕ್‌ಗಳನ್ನು ಮುಚ್ಚಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ನಕಲಿ ವೈದ್ಯಕೀಯ ಪ್ರಕರಣಗಳು ಪತ್ತೆಯಾಗಿವೆ.

 

ನಕಲಿ ವೈದ್ಯರು ಹಾಗೂ ನಿಯಮಬಾಹಿರ ವೈದ್ಯಕೀಯ ಸೇವೆಗಳ ವಿರುದ್ಧ 2025ರಲ್ಲಿ ಕಾರ್ಯಾಚರಣೆ ತೀವ್ರಗೊಂಡಿತ್ತು. ಈ ಕ್ರಮದಲ್ಲಿ ಇದುವರೆಗೆ 87 ಮಂದಿಗೆ ದಂಡ ವಿಧಿಸಲಾಗಿದ್ದು, 29 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

 

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣ

ಆರೋಗ್ಯ ಇಲಾಖೆಯ ಪರಿಶೀಲನೆಯಲ್ಲಿ ಅಕ್ರಮ ಕ್ಲಿನಿಕ್‌ಗಳ ಬಹುತೇಕ ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ಬೆಳಕಿಗೆ ಬಂದಿವೆ. ಜಿಲ್ಲಾವಾರು ಅಂಕಿಅಂಶಗಳಲ್ಲಿ ಕಲಬುರಗಿ 127 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ರಾಯಚೂರು 124 ಹಾಗೂ ಧಾರವಾಡ 75 ಪ್ರಕರಣಗಳನ್ನು ಹೊಂದಿವೆ. ದಕ್ಷಿಣ ಕನ್ನಡದಲ್ಲಿ 20 ಪ್ರಕರಣಗಳು ದಾಖಲಾಗಿವೆ.

 

ಆಸ್ಪತ್ರೆಗಳಲ್ಲಿ ಕೆಲಸ ಮಾಡಿದವರೇ ‘ವೈದ್ಯರು’

ತನಿಖೆ ವೇಳೆ ಕೆಲವು ಅಕ್ರಮ ವೈದ್ಯರು ಆಸ್ಪತ್ರೆಗಳಲ್ಲಿ ನರ್ಸ್‌, ವಾರ್ಡ್‌ಬಾಯ್‌ ಅಥವಾ ಕಾಂಪೌಂಡರ್‌ಗಳಾಗಿ ಕೆಲಸ ಮಾಡಿದ್ದವರು ಎಂಬುದು ಪತ್ತೆಯಾಗಿದೆ. ವೈದ್ಯರು ಚಿಕಿತ್ಸೆ ನೀಡುವುದನ್ನು ಗಮನಿಸಿ ಪಡೆದ ಸೀಮಿತ ಅನುಭವದ ಆಧಾರದ ಮೇಲೆ ಕೆಲವರು ಸ್ವಂತ ಕ್ಲಿನಿಕ್‌ಗಳನ್ನು ಆರಂಭಿಸಿ ಚಿಕಿತ್ಸೆ ನೀಡುತ್ತಿದ್ದರು ಎಂದು ಅಧಿಕಾರಿಗಳ ತನಿಖೆಯಲ್ಲಿ ತಿಳಿದುಬಂದಿದೆ.

 

ಅರ್ಹತೆ ಇಲ್ಲದ ಕೆಲವರು ಅಲೋಪತಿ ಔಷಧ, ಇಂಜೆಕ್ಷನ್‌ ಮತ್ತು ಐವಿ ದ್ರವಗಳನ್ನು ನೀಡುತ್ತಿದ್ದರೆ, ಆಯುರ್ವೇದ ಅಥವಾ ಹೋಮಿಯೋಪತಿ ವಿದ್ಯಾರ್ಹತೆ ಹೊಂದಿದ್ದ ಕೆಲವರು ನಿಯಮ ಉಲ್ಲಂಘಿಸಿ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕೂಡ ಪತ್ತೆಯಾಗಿದೆ.

 

ವೈದ್ಯರ ನೋಂದಣಿ ಪರಿಶೀಲಿಸಲು ಸೂಚನೆ

ನಕಲಿ ವೈದ್ಯರಿಂದ ಚಿಕಿತ್ಸೆ ಪಡೆಯುವುದರಿಂದ ರೋಗಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

 

ಯಾವುದೇ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುವ ಮುನ್ನ ವೈದ್ಯರ ವೈದ್ಯಕೀಯ ಪದವಿ ಹಾಗೂ ಮಾನ್ಯ ವೈದ್ಯಕೀಯ ಮಂಡಳಿ ನೋಂದಣಿ ಪ್ರಮಾಣಪತ್ರವನ್ನು ಪರಿಶೀಲಿಸಿಕೊಳ್ಳುವಂತೆ ಇಲಾಖೆ ಸಲಹೆ ನೀಡಿದೆ. ಅಕ್ರಮ ವೈದ್ಯಕೀಯ ಸೇವೆ ನಡೆಸುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.