ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಿಢೀರ್ ಪರಿಶೀಲನೆ ನಡೆಸಿದ್ದು, ಬಂಟ್ವಾಳ ತಾಲೂಕಿನ ಪುದು, ಮಾಣಿ ಸೇರಿದಂತೆ ಒಟ್ಟು 7 ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಭ್ರಷ್ಟಾಚಾರ, ಖಾತೆ ಬದಲಾವಣೆ, ಸರ್ಕಾರಿ ಯೋಜನೆಗಳ ಅನುಷ್ಠಾನ, ಸಾರ್ವಜನಿಕ ಕಾಮಗಾರಿಗಳಲ್ಲಿನ ಅಕ್ರಮ ಹಾಗೂ ಲಂಚದ ಬೇಡಿಕೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತಿ ಹಾಗೂ ಬಂಟ್ವಾಳ ತಾಲೂಕಿನ ಪುದು, ಮಾಣಿ, ಗೊಳ್ತಮಜಲು, ಪಾಣೆಮಂಗಳೂರು/ಅಡ್ಯಾರ್, ಕುವೆಟ್ಟು ಮತ್ತು ಮಡಂತ್ಯಾರ್ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಲೋಕಾಯುಕ್ತ ತಂಡಗಳು ಪರಿಶೀಲನೆ ನಡೆಸುತ್ತಿವೆ.
ಕಾರವಾರ, ಉಡುಪಿ ಮತ್ತು ಮಂಗಳೂರು ವಿಭಾಗಗಳ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಎಲ್ಲಾ ತಂಡಗಳು ಏಕಕಾಲದಲ್ಲಿ ಸಂಬಂಧಿತ ಪಂಚಾಯತಿ ಕಚೇರಿಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸುತ್ತಿವೆ.
ಪರಿಶೀಲನೆಯ ವೇಳೆ ಪ್ರಮುಖ ಕಡತಗಳು, ಸಾರ್ವಜನಿಕರ ಅರ್ಜಿ ವಿಲೇವಾರಿ ರಿಜಿಸ್ಟರ್, ತೆರಿಗೆ ವಸೂಲಾತಿ ದಾಖಲೆಗಳು, ಕಟ್ಟಡ ನಿರ್ಮಾಣ ಪರವಾನಗಿ ಸಂಬಂಧಿತ ಕಡತಗಳು ಹಾಗೂ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದ ಬಳಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇದಲ್ಲದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು ಮತ್ತು ಇತರ ಸಿಬ್ಬಂದಿಯಿಂದಲೂ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಂದ ಬಂದಿರುವ ದೂರುಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿಯಿಂದ ವಿವರಣೆ ಪಡೆಯಲಾಗುತ್ತಿದೆ.
ಲೋಕಾಯುಕ್ತ ಪೊಲೀಸರ ಏಕಕಾಲದ ದಿಢೀರ್ ಪರಿಶೀಲನೆಯಿಂದ ಜಿಲ್ಲೆಯ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪರಿಶೀಲನೆ ಪೂರ್ಣಗೊಂಡ ಬಳಿಕ ಯಾವುದೇ ಅಕ್ರಮ, ಲೋಪ ಅಥವಾ ನಿಯಮ ಉಲ್ಲಂಘನೆ ಪತ್ತೆಯಾಗಿದೆಯೇ ಎಂಬುದು ಸ್ಪಷ್ಟವಾಗಲಿದೆ.





