20 September 2026 |

ಸುಳ್ಳಮಲೆ ಗುಹಾತೀರ್ಥ ಸ್ನಾನಕ್ಕೆ ಚಾಲನೆ: ಸಂಪ್ರದಾಯದಂತೆ ಕೇರ್ಪು ಅಳವಡಿಕೆ

  • 12 Sep 2026 10:39:50 AM

ಬಂಟ್ವಾಳ: ಸುಳ್ಳಮಲೆ ಗುಹಾತೀರ್ಥದಲ್ಲಿ ನಡೆಯುವ ವಾರ್ಷಿಕ ತೀರ್ಥಸ್ನಾನಕ್ಕೆ ಮುನ್ನ ನಡೆಸುವ ಸಾಂಪ್ರದಾಯಿಕ ಆಚರಣೆಗಳು ಸೆಪ್ಟೆಂಬರ್ 11ರಂದು ನೆರವೇರಿದವು. ಗುಹಾತೀರ್ಥಕ್ಕೆ ತೆರಳಲು ಅನುಕೂಲವಾಗುವಂತೆ ಬಿದಿರಿನಿಂದ ತಯಾರಿಸಿದ ಕೇರ್ಪು (ಏಣಿ)ಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಳವಡಿಸಲಾಯಿತು.

 

ತುಳುನಾಡಿನ ಪುರಾತನ ಹಾಗೂ ವಿಶೇಷ ತೀರ್ಥಕ್ಷೇತ್ರವೆಂದು ಗುರುತಿಸಿಕೊಂಡಿರುವ ಸುಳ್ಳಮಲೆ ಗುಹಾತೀರ್ಥದಲ್ಲಿ ಈ ಸಂಪ್ರದಾಯವು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪ್ರಾರ್ಥನೆ ಸಲ್ಲಿಸಿದ ಬಳಿಕ ಕೇರ್ಪು ಇಡಲಾಗಿದ್ದು, ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

 

ಈ ಸಂದರ್ಭದಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ ಹಾಗೂ ಪ್ರಧಾನ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರು ಮಾತ್ರವಲ್ಲದೆ ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ಕೂಡ ಪಾಲ್ಗೊಂಡಿದ್ದರು.

 

ಸೆಪ್ಟೆಂಬರ್ 11ರಿಂದ 14ರವರೆಗೆ ಭಕ್ತರಿಗೆ ಸುಳ್ಳಮಲೆ ಗುಹಾತೀರ್ಥದಲ್ಲಿ ತೀರ್ಥಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಭಾದ್ರಪದ ಶುಕ್ಲ ಚೌತಿಯವರೆಗೆ ನಡೆಯುವ ಈ ತೀರ್ಥಸ್ನಾನಕ್ಕೆ ಭಕ್ತರು ಆಗಮಿಸಲಿದ್ದಾರೆ.