ಮಂಗಳೂರು: ಅಡಿಕೆ ಹಾಳೆಯಿಂದ ತಯಾರಿಸುವ ತಟ್ಟೆಗಳಲ್ಲಿ ರಾಸಾಯನಿಕ ಅಂಶಗಳ ಪ್ರಮಾಣ ಹೆಚ್ಚಿದೆ ಎಂಬ ಕಾರಣಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ವಿಧಿಸಿರುವ ನಿಷೇಧವನ್ನು ಮರುಪರಿಶೀಲಿಸುವಂತೆ ಅಗ್ರಿಲೀಫ್ ಸಂಸ್ಥೆ ಮನವಿ ಮಾಡಿದೆ. ಈ ಸಂಬಂಧ ನಡೆಸಿದ ವೈಜ್ಞಾನಿಕ ಅಧ್ಯಯನದ ವರದಿಯನ್ನು ಸಂಸ್ಥೆ ಸಲ್ಲಿಸಿದೆ.
ಅಡಿಕೆ ಹಾಳೆ ಉತ್ಪನ್ನಗಳಿಂದ ಅರೆಕೋಲಿನ್, ಅರೆಕೈಡಿನ್, ಗುವಾಕೋಲಿನ್ ಹಾಗೂ ಗುವಾಸಿನ್‌ನಂತಹ ರಾಸಾಯನಿಕಗಳು ಆಹಾರಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದು ಎಫ್‌ಡಿಎ 2025ರಲ್ಲಿ ಅಡಿಕೆ ಹಾಳೆ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಅಲ್ಲದೆ, ಅವುಗಳನ್ನು ‘ಆಮದು ಎಚ್ಚರಿಕೆ 23-15’ರ ವ್ಯಾಪ್ತಿಗೆ ಸೇರಿಸಿತ್ತು.
ಈ ಕ್ರಮದಿಂದ ಅಡಿಕೆ ಹಾಳೆ ತಟ್ಟೆಗಳನ್ನು ತಯಾರಿಸುವ ಸುಮಾರು 5,000ರಿಂದ 7,000 ಸಣ್ಣ ಮತ್ತು ಅತಿಸಣ್ಣ ಉತ್ಪಾದನಾ ಘಟಕಗಳಲ್ಲಿ ಅನಿಶ್ಚಿತತೆ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ 16 ತಿಂಗಳ ಕಾಲ ನಡೆಸಿದ ವಿಸ್ತೃತ ವೈಜ್ಞಾನಿಕ ಅಧ್ಯಯನದಲ್ಲಿ ಪರೀಕ್ಷಿಸಲಾದ ಮಾದರಿಗಳಲ್ಲಿನ ರಾಸಾಯನಿಕ ಅಂಶಗಳ ಪ್ರಮಾಣ ಎಫ್‌ಡಿಎ ಉಲ್ಲೇಖಿಸಿದ್ದ ಮಟ್ಟಕ್ಕಿಂತ ಸುಮಾರು ಸಾವಿರ ಪಟ್ಟು ಕಡಿಮೆ ಇರುವುದು ಕಂಡುಬಂದಿದೆ. ಹಾನಿಕಾರಕ ಅಲ್ಕಲಾಯ್ಡ್‌ಗಳ ಪ್ರಮಾಣವೂ ಅತ್ಯಂತ ಕಡಿಮೆ ಎಂದು ಅಗ್ರಿಲೀಫ್ ಸಂಸ್ಥಾಪಕ ಅವಿನಾಶ ರಾವ್ ಶನಿವಾರ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಜೈವಿಕ ರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಅಮೆರಿಕದಲ್ಲಿ ಕ್ಯಾನ್ಸರ್ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆ ನಡೆಸಿರುವ ಡಾ. ಗೋಪಾಲ್ ಮರಾಠ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಮಾಹೆ ಲೈಫ್ ಸೈನ್ಸಸ್ ಸೇರಿದಂತೆ ವಿವಿಧ ಸಂಸ್ಥೆಗಳು ಸಂಶೋಧನೆಯಲ್ಲಿ ಸಹಕರಿಸಿವೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಪ್ರತಿ ಉತ್ಪಾದನಾ ಬ್ಯಾಚ್‌ನ ಅಡಿಕೆ ಹಾಳೆಗಳನ್ನು ಪರೀಕ್ಷಿಸುವ ವ್ಯವಸ್ಥೆ ರೂಪಿಸಲಾಗುವುದು. ಪಾರದರ್ಶಕ ವೈಜ್ಞಾನಿಕ ಪರಿಶೀಲನೆ, ಪ್ರಮಾಣೀಕೃತ ಪರೀಕ್ಷಾ ವಿಧಾನಗಳು ಹಾಗೂ ಅಗತ್ಯ ಮಾನದಂಡಗಳನ್ನು ರೂಪಿಸುವುದರ ಜೊತೆಗೆ ಹೆಚ್ಚಿನ ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳ ಸಹಯೋಗ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವಿನಾಶ ರಾವ್ ತಿಳಿಸಿದರು.





