20 September 2026 |

ಸಕಲೇಶಪುರದಲ್ಲಿ ಲಾಡ್ಜ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು

  • 16 Sep 2026 01:54:12 PM

ಸಕಲೇಶಪುರ: ಪ್ರವಾಸಕ್ಕೆಂದು ಇಬ್ಬರು ಯುವಕರೊಂದಿಗೆ ಸಕಲೇಶಪುರಕ್ಕೆ ಬಂದಿದ್ದ 23 ವರ್ಷದ ಯುವತಿಯೊಬ್ಬಳು ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಕೂಡಿಗೆಯಲ್ಲಿ ನಡೆದಿದೆ.

 

ಬೆಂಗಳೂರು ಮೂಲದ ವರ್ಷ ಮೃತ ಯುವತಿ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 11ರಂದು ಇಬ್ಬರು ಯುವಕರೊಂದಿಗೆ ಲಾಡ್ಜ್‌ಗೆ ಆಗಮಿಸಿದ್ದ ಅವರು, ಬಳಿಕ ಮೂವರು ಸಕಲೇಶಪುರದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಒಂದೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.

 

ಮಂಗಳವಾರ ಲಾಡ್ಜ್‌ನ ಸ್ನಾನಗೃಹದಲ್ಲಿ ವರ್ಷ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯೊಂದಿಗೆ ಇದ್ದ ಇಬ್ಬರು ಯುವಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಸಕಲೇಶಪುರ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

 

ಘಟನೆಗೆ ಸಂಬಂಧಿಸಿದಂತೆ ಲಾಡ್ಜ್‌ನಲ್ಲಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಸಂಬಂಧಪಟ್ಟ ಲಾಡ್ಜ್‌ ಅನ್ನು ಯಾವುದೇ ಅಧಿಕೃತ ಅನುಮತಿ ಇಲ್ಲದೆ ನಡೆಸಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

 

ಡಿವೈಎಸ್‌ಪಿ ಮಾಲತೀಶ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವತಿಯ ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.