20 September 2026 |

ಉಪ್ಪಿನಂಗಡಿಯ ಪೆರ್ನೆಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ

  • 19 Sep 2026 06:29:03 PM

ಉಪ್ಪಿನಂಗಡಿ: ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದಿರುವ ಆಘಾತಕಾರಿ ಘಟನೆ ಸೆ.19ರಂದು ಮಧ್ಯಾಹ್ನ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆಯಲ್ಲಿ ನಡೆದಿದೆ.

 

ಪೆರ್ನೆಯಲ್ಲಿ ವಾಸವಾಗಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ದಂಪತಿ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ನಡೆದಿತ್ತು ಎನ್ನಲಾಗಿದೆ.
 

ಈ ವೇಳೆ ಕೋಪಗೊಂಡ ನೂರುನ್ನಿಸಾ ಮನೆಯಲ್ಲಿದ್ದ ತನ್ನ ಸುಮಾರು ಮೂರುವರೆ ವರ್ಷದ ಮಗುವನ್ನು ಹಾಗೂ ಪತಿಯ ತಂಗಿಯ ಸುಮಾರು ಮೂರು ವರ್ಷದ ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

 

ಘಟನೆ ಗಮನಕ್ಕೆ ಬಂದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಎರಡೂ ಮಕ್ಕಳನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಆದರೆ ಪತಿಯ ತಂಗಿಯ ಸುಮಾರು ಮೂರು ವರ್ಷದ ಮಗು ಮೃತಪಟ್ಟಿದ್ದು, ನೂರುನ್ನಿಸಾ ಅವರ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 121/2026ರಂತೆ ಪ್ರಕರಣ ದಾಖಲಾಗಿದೆ. ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.