20 September 2026 |

ನಕಲಿ ತುಪ್ಪ ಬಳಸಿ ತಿರುಪತಿ ಲಡ್ಡು ತಯಾರಿ ಆರೋಪ: ಸುಕೃತಿ ಫುಡ್ಸ್ ಪ್ರವರ್ತಕನನ್ನು ಬಂಧಿಸಿದ ಇಡಿ

  • 20 Sep 2026 10:43:42 AM

ಹೈದರಾಬಾದ್‌: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ವಿತರಿಸಲಾಗುವ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಪೂರೈಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಮಹತ್ವದ ಕ್ರಮ ಕೈಗೊಂಡಿದೆ. ‘ಸುಕೃತಿ ಫುಡ್ಸ್’ ಸಂಸ್ಥೆಯ ಪ್ರವರ್ತಕ ಕೈಲಾಶ್ ಚಂದ್ ಮಂಗ್ಲಾ ಅವರನ್ನು ಇಡಿ ಬಂಧಿಸಿದೆ.

 

ಸೆಪ್ಟೆಂಬರ್ 17ರಂದು ಹೈದರಾಬಾದ್‌ನಲ್ಲಿರುವ ತನ್ನ ಕಚೇರಿಯಲ್ಲಿ ಮಂಗ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಬಳಿಕ ಅವರನ್ನು ವಿಶಾಖಪಟ್ಟಣದಲ್ಲಿರುವ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಸಂಸ್ಥೆ ಹೇಳಿದೆ.

 

ಇಡಿ ಆರೋಪದ ಪ್ರಕಾರ, ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾಗಿದೆ ಎನ್ನಲಾದ ತುಪ್ಪದಲ್ಲಿ ಸಾಮಾನ್ಯ ಹಾಲಿನ ಕೊಬ್ಬಿನ ಬದಲು ವಿವಿಧ ಪಾಮ್ ಎಣ್ಣೆ ಉತ್ಪನ್ನಗಳು ಮತ್ತು ರಾಸಾಯನಿಕ ಪದಾರ್ಥಗಳನ್ನು ಬಳಸಲಾಗಿತ್ತು. ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್, ಪಾಮೋಲಿನ್ ಜೊತೆಗೆ MG-90, ಮೊನೊಗ್ಲಿಸರೈಡ್‌ಗಳು, ಮೈವಾಸೆಟ್ ಸಾಫ್ಟ್ 400 ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ಗಳನ್ನು ಬಳಸಿ ಈ ಕಲಬೆರಕೆ ತುಪ್ಪವನ್ನು ತಯಾರಿಸಲಾಗುತ್ತಿತ್ತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

 

ನಂತರ ಈ ಉತ್ಪನ್ನವನ್ನು ‘ಅಗ್‌ಮಾರ್ಕ್ ಸ್ಪೆಷಲ್ ಗ್ರೇಡ್ ಹಸುವಿನ ತುಪ್ಪ’ ಎಂಬ ಹೆಸರಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪೂರೈಸಲಾಗಿದೆ ಎಂದು ಇಡಿ ತಿಳಿಸಿದೆ.

 

2019ರಿಂದ 2024ರ ಅವಧಿಯಲ್ಲಿ ಟಿಟಿಡಿಗೆ ವಂಚನೆಯ ಮೂಲಕ ತುಪ್ಪ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಒಟ್ಟು ವ್ಯವಹಾರದ ಮೌಲ್ಯ ಸುಮಾರು ₹230 ಕೋಟಿ ಎಂದು ತನಿಖಾ ಸಂಸ್ಥೆ ಹೇಳಿದೆ. ಈ ಪೈಕಿ ಸುಮಾರು ₹96 ಕೋಟಿ ಮೌಲ್ಯದ ಕಲಬೆರಕೆ ತುಪ್ಪವನ್ನು ಕೈಲಾಶ್ ಚಂದ್ ಮಂಗ್ಲಾ ತಯಾರಿಸಿದ್ದರು ಎಂಬ ಆರೋಪವೂ ಇದೆ.

 

ಈ ಪ್ರಕರಣದಲ್ಲಿ ಮಂಗ್ಲಾ ಅವರು ಸಹ-ಪಿತೂರಿದಾರರಲ್ಲಿ ಒಬ್ಬರಾಗಿದ್ದರು ಎಂದು ಇಡಿ ಹೇಳಿದೆ. ಕಲಬೆರಕೆ ತುಪ್ಪ ತಯಾರಿಸಲು ಅಗತ್ಯವಾದ ವಸ್ತುಗಳ ಖರೀದಿಗೆ ನೆರವು ನೀಡುವುದರ ಜೊತೆಗೆ, ತಮ್ಮ ಕಾರ್ಖಾನೆ ಆವರಣದಲ್ಲೇ ಆರೋಪಿತ ಕಲಬೆರಕೆ ತುಪ್ಪವನ್ನು ತಯಾರಿಸುವಲ್ಲಿ ಅವರು ಭಾಗಿಯಾಗಿದ್ದರು ಎಂದು ಸಂಸ್ಥೆ ಆರೋಪಿಸಿದೆ.