ಮಂಗಳೂರು: ಕಾರ್ಕಳ–ಮೂಡುಬಿದಿರೆ ಹೆದ್ದಾರಿಯ ಸಾಣೂರು ಜಂಕ್ಷನ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಮಾನಾಥ ರೈ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ತಮ್ಮ ಆರೋಗ್ಯದ ಕುರಿತು ಪ್ರತಿಕ್ರಿಯಿಸಿರುವ ರಮಾನಾಥ ರೈ ಅವರು, “ದೇವರ ದಯೆಯಿಂದ, ನಿಮ್ಮೆಲ್ಲರ ಪ್ರಾರ್ಥನೆಯಿಂದ ನಾನು ಉಷಾರಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಭಾನುವಾರ ಕಾರ್ಕಳ–ಮೂಡುಬಿದಿರೆ ಹೆದ್ದಾರಿಯ ಸಾಣೂರು ಜಂಕ್ಷನ್‌ನಲ್ಲಿ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗಕ್ಕೆ ಭಾರೀ ಹಾನಿಯಾಗಿತ್ತು. ಘಟನೆಯಲ್ಲಿ ರಮಾನಾಥ ರೈ ಸೇರಿದಂತೆ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಸದ್ಯ ರಮಾನಾಥ ರೈ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.





