21 June 2025 | Join group

ನಮ್ಮನ್ನು ನಗಿಸಿದ ನಟ ರಾಕೇಶ್ ಪೂಜಾರಿ ಇನ್ನಿಲ್ಲ – ‘ಕಾಮಿಡಿ ಕಿಲಾಡಿ’ ವಿಜೇತನಾಗಿ ಮಿಂಚಿದ ಈ ನಟನ ಸಾಧನೆಯ ಒಂದು ಅಣುಕು ನೋಟ

  • 12 May 2025 10:13:45 AM

ಉಡುಪಿ, ಮೇ 12: ಕನ್ನಡದ ಕಾಮಿಡಿ ಕಿಲಾಡಿಗಳು ಸೀಸನ್ - 3 ಇದರ ಹೆಸರುವಾಸಿ ಕಲಾವಿದ ರಾಕೇಶ್ ಪೂಜಾರಿ ಇಹಲೋಕ ತ್ಯಜಿಸಿದ್ದಾರೆ. 33 ವರ್ಷ ಪ್ರಾಯದ ರಾಕೇಶ್ ಪೂಜಾರಿ ಮೇ 11 ರ ತಡರಾತ್ರಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

 

ಬಲ್ಲ ಮೂಲಗಳ ಪ್ರಕಾರ ಉಡುಪಿ ಜಿಲ್ಲೆಯ ರಾಕೇಶ್ ಪೂಜಾರಿ ನಿನ್ನೆ ರಾತ್ರಿ ಕಾರ್ಕಳದಲ್ಲಿ ತನ್ನ ಗೆಳೆಯನ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಒಂದೇ ಸವನೆ ಕೆಳಗೆ ಬಿದ್ದು, ತನ್ನ ಕೊನೆಯ ಉಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

 

ಇವರು ತಮ್ಮ ಗೆಳೆಯರ ಜೊತೆ ಈ ಕಾರ್ಯಕ್ರಮಕ್ಕೆ ಹೋಗಿದ್ದು ಉಸಿರಾಟದ ತೊಂದರೆಯಿಂದ ಒಮ್ಮೆಲೇ ಕೆಳಗೆ ಬಿದ್ದ ರಾಕೇಶ್ ಪೂಜಾರಿಯವರನ್ನು ತಕ್ಷಣ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ರಾಕೇಶ್ ಪೂಜಾರಿಯವರು ಕಾಮಿಡಿ ಕಿಲಾಡಿಗಳು ಸೀಸನ್ 3 ವಿಜೇತರಾಗಿದ್ದು ತುಂಬಾ ಹೆಸರುವಾಸಿಯಾಗಿದ್ದರು. ಇವರ ವಿಶಿಷ್ಟ ಪ್ರದರ್ಶನದಿಂದ ಜನರ ಮನ ಸೆಳೆದಿದ್ದರು.

 

ಇವರ ಹಠಾತ್ ನಿಧನ ಇಡೀ ಚಿತ್ರರಂಗಕ್ಕೆ ಬೇಸರವನ್ನು ತಂದಿದೆ. ನಟಿ ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ತೀರ್ಪುಗಾರರಾಗಿರುವ ರಕ್ಷಿತಾ ಪ್ರೇಮ್ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ದಿ ಮೋಸ್ಟ ಸ್ವೀಟೆಸ್ಟ್ ಕೈಂಡ್ಡೆಸ್ಟ್ ಅಂಡ್ ಲವಿಂಗ್ ಪರ್ಸನ್.... ವಿಲ್ ಮಿಸ್ ಯು ಮಗನೇ" ( The most sweetest, kindest and loving person..miss you magane) ಎಂದು ಅವರು ತನ್ನ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

 

ಹಲವಾರು ತುಳು ಸಿನಿಮಾ ಮತ್ತು ರಿಯಾಲಿಟಿ ಶೋ ಗಳಲ್ಲಿ ನಟನೆ

ಇವರು ತನ್ನ ಮೊದಲ ನಟನೆಯ ಜೀವನ ಶುರು ಮಾಡಿದ್ದು 'ಚೈತನ್ಯ ಕಲಾವಿದರು' ತಂಡದ ಜೊತೆ. 2014ರಲ್ಲಿ ಇವರು ರಿಯಾಲಿಟಿ ಶೋ 'ಕಡ್ಲೆ ಬಜಿಲ್' ನಲ್ಲಿ ಕಾಣಿಸಿಕೊಂಡಿದ್ದು ಇದು ಇವರ ನಟನೆಯ ಜಗತ್ತಿಗೆ ಮುನ್ನುಡಿ ಬರೆದಿತ್ತು. ಈ ರಿಯಾಲಿಟಿ ಶೋ ಸ್ಥಳೀಯ ಚಾನೆಲ್ ಗಳಲ್ಲಿ ಹೆಸರುವಾಸಿಯಾಗಿತ್ತು.

 

ತುಳು ಸಿನಿಮಾಗಳಾದ 'ಪೆಟ್ ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ ದೀ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್' ಇಂಥ ಹಲವಾರು ಸಿನಿಮಾ ಮತ್ತು ಕಾಮಿಡಿ ಶೋಗಳಲ್ಲಿ ನಟಿಸಿದ ಕೀರ್ತಿ ರಾಕೇಶ್ ಪೂಜಾರಿಯವರದ್ದು. ಕರಾವಳಿಯ ಪ್ರಸಿದ್ಧ ರಿಯಾಲಿಟಿ ಶೋಗಳಾದ ಬಲೆ ತೆಲಿಪಲೆ, ಮೇ 22, ಸ್ಟಾರ್, ತುಯಿನಯೇ ಪೋಯೆ ಹಾಗೂ ಇನ್ನಿತರ ಶೋಗಳಲ್ಲಿ ನಟಿಸಿದ್ದರು.

 

ಕಾಮಿಡಿ ಕಿಲಾಡಿಗಳು ವಿಜೇತ

ಸರಿಸುಮಾರು 150 ಎಡಿಷನ್ ನೀಡಿದ ನಂತರ ರಾಕೇಶ್ ಪೂಜಾರಿಯವರು ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು ಸೀಸನ್ 2' ಗೆ 2018ರಲ್ಲಿ ಆಯ್ಕೆಯಾಗಿದ್ದರು.

 

ಕನ್ನಡ ಸಿನಿಮಾಗಳಲ್ಲೂ ನಟನೆ

ರಾಕೇಶ್ ರವರು ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡ ಸಿನಿಮಾಗಳಾದ 'ಪೈಲ್ವಾನ್' ಮತ್ತು 'ಇದು ಎಂಥ ಲೋಕವಯ್ಯ' ಸಿನಿಮಾಗಳಲ್ಲಿ ನಟಿಸಿದ್ದರು. ಟಿವಿಗಳಲ್ಲೇ ನಟಿಸಿದ್ದ 'ಹಿಟ್ಲರ್ ಕಲ್ಯಾಣ' ಸೀರಿಯಲ್ ನಲ್ಲಿ ಇವರು ಅತಿಹೆಚ್ಚಿನ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಆದರೆ ಆ ಸೀಸನ್ ನಲ್ಲಿ ರನ್ನರ್ ಅಪ್ ಆಗಿ ಕಾಣಿಸಿಕೊಂಡಿದ್ದರು ಮತ್ತು ನಂತರದ 2020 ರ ಕಾಮಿಡಿ ಕಿಲಾಡಿಗಳು ಸೀಸನ್ 3 ರಲ್ಲಿ ತನ್ನ ಉತ್ತಮ ಪ್ರದರ್ಶನದಿಂದ ಪ್ರಥಮ ಸ್ಥಾನದಿಂದ ವಿಜೇತರಾಗಿ ಹೆಸರುವಾಸಿಯಾಗಿದ್ದರು.

 

ಕರಾವಳಿಯ ಪ್ರತಿಭೆ ಇನ್ನಿಲ್ಲ, ಸಂತಾಪ ಸೂಚನೆ

ಕರಾವಳಿ ಭಾಗದಿಂದ ತನ್ನ ನಟನೆಯ ಚಾತುರ್ಯದಿಂದ ಮೇಲೆದ್ದು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ನಟನ ಈ ರೀತಿಯ ನಿಧನ ಕರಾವಳಿ ಭಾಗದ ಜನರಿಗೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಅತೀವ ಬೇಸರ ತಂದಿದೆ. ಗಣ್ಯಾತಿ ಗಣ್ಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಕೇಶ್ ಪೂಜಾರಿಯವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.