04 November 2026 |

ಉಡುಪಿಯಲ್ಲಿ ಶಾಲೆಗೆ ಹೋಗದ 30 ಮಕ್ಕಳು ಪತ್ತೆ: ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ

  • 04 Nov 2026 03:59:45 PM

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಮೀನು ಕಾರ್ಖಾನೆಯೊಂದರ ಸಮೀಪ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 30 ಮಕ್ಕಳು ಪತ್ತೆಯಾಗಿದ್ದಾರೆ. 6ರಿಂದ 14 ವರ್ಷ ವಯಸ್ಸಿನ ಈ ಮಕ್ಕಳು ಶಾಲೆಗೆ ತೆರಳದೆ ಕಾರ್ಖಾನೆಯ ಸುತ್ತಮುತ್ತ ಸಮಯ ಕಳೆಯುತ್ತಿರುವುದು ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.

 

ಅಕ್ಕ ಪಡೆ ತಂಡವು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಿದೆ. ಪತ್ತೆಯಾದ ಮಕ್ಕಳಿಗೆ ಸೂಕ್ತ ರಕ್ಷಣೆ ಹಾಗೂ ಆರೈಕೆ ಒದಗಿಸುವ ಉದ್ದೇಶದಿಂದ ಅವರನ್ನು ಪ್ರತ್ಯೇಕ ಮಕ್ಕಳ ಗೃಹಗಳಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ.

 

ಈ ಪೈಕಿ 7 ಬಾಲಕಿಯರನ್ನು ಬಾಲಕಿಯರ ಗೃಹಕ್ಕೆ ಹಾಗೂ 23 ಬಾಲಕರನ್ನು ಬಾಲಕರ ಗೃಹಕ್ಕೆ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕೆ ಅಗತ್ಯವಿರುವ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.