ಕುಕ್ಕೆ ಸುಬ್ರಹ್ಮಣ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಮಾರಧಾರ ನದಿಗೆ ಹಾರಿದ ಮಹಿಳೆಯೊಬ್ಬರು ಮೊಸಳೆಯ ದಾಳಿಯಿಂದಾಗಿ ಬದುಕುಳಿದಿರುವ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ನವೆಂಬರ್ 4ರ ತಡರಾತ್ರಿ ಕುಮಾರಧಾರ ಸೇತುವೆ ಸಮೀಪ ಈ ಘಟನೆ ಸಂಭವಿಸಿದೆ.
ನದಿಗೆ ಹಾರಿದ ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದೆ. ಇದರಿಂದ ತೀವ್ರ ನೋವು ಮತ್ತು ಭಯಕ್ಕೆ ಒಳಗಾದ ಮಹಿಳೆ ನದಿಯ ಮಧ್ಯದಲ್ಲೇ ಜೋರಾಗಿ ಕೂಗಿಕೊಂಡಿದ್ದಾರೆ. ಅವರ ಕಿರುಚಾಟ ಕೇಳಿದ ಸೇತುವೆ ಸಮೀಪದ ವಸತಿಗೃಹದ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಟಾರ್ಚ್ ಹಿಡಿದು ನದಿ ದಡಕ್ಕೆ ಧಾವಿಸಿದ್ದಾರೆ.
ಜನರು ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ಮೊಸಳೆ ಮಹಿಳೆಯನ್ನು ಬಿಟ್ಟು ನೀರಿನೊಳಗೆ ಮರೆಯಾಗಿದೆ. ಕೂಡಲೇ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ಸುರಕ್ಷಿತವಾಗಿ ನದಿಯಿಂದ ಹೊರಗೆ ಕರೆತಂದಿದ್ದಾರೆ.
ಸಾಮಾನ್ಯವಾಗಿ ನದಿಗೆ ಹಾರಿದ್ದ ಮಹಿಳೆ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು. ಆದರೆ ಮೊಸಳೆಯ ದಾಳಿಯಿಂದ ಉಂಟಾದ ಭಯದಿಂದ ಅವರು ಜೋರಾಗಿ ಕೂಗಿಕೊಂಡಿದ್ದು, ಸ್ಥಳೀಯರ ಗಮನ ಸೆಳೆಯಲು ಕಾರಣವಾಯಿತು. ಹೀಗಾಗಿ ಮೊಸಳೆಯ ದಾಳಿಯೇ ಪರೋಕ್ಷವಾಗಿ ಮಹಿಳೆಯ ಜೀವ ಉಳಿಸಲು ಕಾರಣವಾಗಿದೆ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯಿಂದ ವಿವರ ಪಡೆದಿದ್ದಾರೆ. ಈ ವೇಳೆ ಉಡುಪಿಯವರಾದ ಮಹಿಳೆ ಕೌಟುಂಬಿಕ ವಿಚಾರಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನದಿಗೆ ಹಾರಿದ್ದಾಗಿ ತಿಳಿಸಿದ್ದಾರೆ.
ಬಳಿಕ ಪೊಲೀಸರು ಉಡುಪಿಯಲ್ಲಿದ್ದ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಮಹಿಳೆಗೆ ಅಗತ್ಯ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸಿದ ನಂತರ ಕುಟುಂಬದವರೊಂದಿಗೆ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.





