ಬೆಂಗಳೂರು: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆಯವರ ಕಾರನ್ನು ಓವರ್ ಟೇಕ್ ಮಾಡಿರುವ ಬಗ್ಗೆ ಅವರ ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಹಲ್ಲೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಎಫ್ಐಆರ್ ದಾಖಲಾಗಿದೆ. ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ಮೇಲೆ ಹಲ್ಲೆಯ ಪ್ರಕರಣ ದಾಬಸ್ ಪೇಟೆ ಠಾಣೆಯಲ್ಲಿ ದಾಖಲಾಗಿದೆ.
ಹಲ್ಲೆ ಪ್ರಕರಣ ಖಂಡಿಸಿ ದಾಬಸ್ ಪೇಟೆ ಪೊಲೀಸ್ ಠಾಣೆಯ ಎದುರು ಹಲ್ಲೆಗೊಳಗಾದ ಕುಟುಂಬಸ್ಥರಿಂದ ಪ್ರತಿಭಟನೆ ನಡೆಸಿದ್ದಾರೆ. ಅನಂತ್ ಕುಮಾರ್ ಹೆಗಡೆಯವರನ್ನು ಕೂಡ ಅರೆಸ್ಟ್ ಮಾಡಬೇಕು ಎಂದು ಗಾಯಗೊಳಗಾದ ವ್ಯಕ್ತಿಗಳ ಸಂಬಂಧಿಕರು ಒತ್ತಾಯಿಸಿದ್ದಾರೆ.
ಓವರ್ ಟೇಕ್ ವಿಚಾರದಲ್ಲಿ ಗಲಾಟೆಯಾಗಿ ಕಾರಿನಲ್ಲಿದ್ದ ಮುಸ್ಲಿಂ ವ್ಯಕ್ತಿಗಳಿಗೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗುಂಡಾಗಿರಿ ನಡೆಸಿದ ಆರೋಪದಲ್ಲಿ ಇವರ ಮೇಲೆ ಎಫ್ಐಆರ್ ದಾಖಲಾಗಿದೆ.