ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಪ್ರಕರಣ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಮುಂಬೈನ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ ಹೈರ್‌ಗ್ಲೋ ಎಲಿಗಂಟ್ ಓವರ್‌ಸೀಸ್ ಇಂಟರ್‌ನ್ಯಾಷನಲ್ (ಒಪಿಸಿ) ಪ್ರೈವೇಟ್ ಲಿಮಿಟೆಡ್ ಎಂಬ ಕಚೇರಿಯನ್ನು ತೆರೆದು. ವಿದೇಶಗಳಲ್ಲಿ ಉದ್ಯೋಗಗಳಿಗೆ ಕೆಲಸದ ವೀಸಾಗಳನ್ನು ಒದಗಿಸುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿ ಉದ್ಯೋಗಾಕಾಂಕ್ಷಿಗಳಿಗೆ ನಂಬಿಕೆ ಬರುವಂತೆ ಮಾಡಿ ಅವರಿಂದ ಲಕ್ಷಾಂತರ ಹಣವನ್ನು ಪಡೆದುಕೊಂಡು ವೀಸಾ ನೀಡದೆ ಮೋಸ ಮಾಡಿದ್ದಾರೆ.
ಸುಮಾರು 286 ಜನರಿಗೆ 4ಕೋಟಿ 50ಲಕ್ಷ ರೂ. ವಂಚನೆ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ವೀಸಾ ಕೂಡ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.
ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಹೇಳಿ ನಂಬಿಸಿ ಮಂಗಳೂರು ಸಾರ್ವಜನಿಕರಿಂದ ಹಣ ಪಡೆದ ವಂಚಿಸಿದ ಪ್ರಕರಣದಲ್ಲಿ ಆರೋಪಿಗಳಾದ ದಿಲ್ಶಾದ್ ಅಬ್ದುಲ್ ಸತ್ತಾರ್ ಖಾನ್ (45), ಫ್ಲಾಟ್ ನಂ. 103, 1 ನೇ ಮಹಡಿ, 'ಸಿ' ವಿಂಗ್, ರಾಮಚಂದ್ರ ನಿವಾಸ, ಕೋಪರಖೈರಣೆ, ನವಿ ಮುಂಬೈ, ಮಹಾರಾಷ್ಟ್ರ ಹಾಗೂ ಸಾಹುಕಾರಿ ಕಿಶೋರ್ ಕುಮಾರ್ @ ಅನಿಲ್ ಪಾಟೀಲ್ (34), ಫ್ಲಾಟ್ ನಂ 504, 5 ನೇ ಮಹಡಿ, 'ಜೆ' ವಿಂಗ್, ಎಸ್ಪಿಲಾ ಅಪಾರ್ಟ್‌ಮೆಂಟ್, ಪಲವಾ ನಗರ, ಮಹಾರಾಷ್ಟ್ರ, ಡೊಂಬಿವಿಲಿ, ಥಾಣೆ ಎಂದು ಗುರುತಿಸಲಾಗಿದೆ.
ಪೊಲೀಸರ ಈ ಹಿಂದಿನ ಕಾರ್ಯಾಚರಣೆಯಲ್ಲಿ, ಸಿಸಿಬಿ ಮುಂಬೈ ನಿವಾಸಿ ಮಸಿಹುಲ್ಲಾ ಖಾನ್ ಎಂಬ ಆರೋಪಿಯನ್ನು ಬಂಧಿಸಿದ್ದರು, ಆತ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬಂಧಿಸಿದ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.