ಮಂಗಳೂರು: ಒಬ್ಬ 'ಪರಿಚಿತ ಗ್ರಾಹಕಿ' ಎಂಬ ಹೆಸರಿನಲ್ಲಿ ಅಂಗಡಿಗೆ ನುಗ್ಗಿ, ನಂಬಿಕೆ ಬೆಳೆಸಿ, ನಂತರ ನಕಲಿ ಪಾವತಿ ರಶೀದಿ ಮತ್ತು ಬೌನ್ಸ್ ಆದ ಚೆಕ್ ಬಳಸಿ ಲಕ್ಷಾಂತರ ರೂಪಾಯಿಗಳ ಲ್ಯಾಪ್‌ಟಾಪ್‌ಗಳನ್ನು ದೋಚಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಫರೀದಾ ಎಂಬ ಮಹಿಳೆ, ಎಂಪೈರ್ ಮಾಲ್‌ನಲ್ಲಿರುವ ಲ್ಯಾಪ್‌ಟಾಪ್ ಅಂಗಡಿಗೆ ಬಂದು, ತನ್ನ ಮಗ ಕತಾರ್‌ಗೆ ಹೋಗುತ್ತಿರುವುದು ಹಾಗೂ ತುರ್ತಾಗಿ ಮ್ಯಾಕ್‌ಬುಕ್ ಬೇಕೆಂದು ಹೇಳಿದ್ದಾಳೆ. ತನ್ನ ಬಳಿ ನಗದು ಹಣ ಇಲ್ಲ ಎಂದು ಹೇಳಿ, ಚೆಕ್ ಮೂಲಕ ಪಾವತಿಸುತ್ತೇನೆ ಎಂದು ನಂಬಿಕೆ ಹುಟ್ಟುಹಾಕಿದಳು.
ಚೆಕ್ ಕೊಟ್ಟ ದಿನವೇ ಬ್ಯಾಂಕ್ ರಜಾ ದಿನವಾಗಿದ್ದರಿಂದ ವಹಿವಾಟು ತಕ್ಷಣ ಮುಕ್ತಾಯವಾಗಲಿಲ್ಲ. ಈ ನಡುವೆಯೇ WhatsApp ಮೂಲಕ NEFT ರಶೀದಿ ಕಳುಹಿಸಿ ನಂಬಿಕೆ ಹುಟ್ಟಿಸಿ, ಇನ್ನೂ ಎರಡು ಲ್ಯಾಪ್‌ಟಾಪ್‌ಗಳನ್ನು ಖರೀದಿ ಮಾಡಿಕೊಂಡಿದ್ದಾಳೆ.
ನಂತರ ಮಾಲಕರು ಪಾವತಿಯ ಬಗ್ಗೆ ಪರಿಶೀಲನೆ ನಡೆಸಿದಾಗ, ಅದನ್ನು ನಕಲಿ ಎಂದು ತಿಳಿದು ಫುಲ್ ಶಾಕ್. ಈಕೆಯ ವಿರುದ್ಧ ಮಂಗಳೂರು, ಉಡುಪಿ ಮತ್ತು ಮೂಡುಬಿದಿರೆಯಲ್ಲಿ ಈಗಾಗಲೇ ವಂಚನೆ ಪ್ರಕರಣಗಳಿವೆ ಎನ್ನಲಾಗಿದೆ. ವಸ್ತು ಪಡೆಯಲು ಮಾಸ್ಟರ್ ಪ್ಲಾನ್ ರೂಪಿಸಿ, ಬೇರೆಯವರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡ ಫರೀದಾ, ಇಂತಹ ಕಳ್ಳತನಗಳಲ್ಲಿ ನಿಪುಣತೆ ಹೊಂದಿದ್ದಾಳೆ ಎನ್ನಲಾಗಿದೆ.